ಬೆಂಗಳೂರು: ಚಿನ್ನದ ಗಟ್ಟಿ ಕದ್ದ ಕೆಲಸಗಾರನ ಬಂಧನ, 4 ಕೋಟಿ ಮೌಲ್ಯದ 11.2 ಕೆ.ಜಿ. ಚಿನ್ನ ವಶ
ಶೀಘ್ರ ಶ್ರೀಮಂತನಾಗಬೇಕು ಎಂಬ ದುರಾಸೆಯಿಂದ ಗಟ್ಟಿ ಚಿನ್ನ ಕದ್ದು ಪರಾರಿಯಾಗಿದ್ದ ಕೆಲಸಗಾರನೋರ್ವನನ್ನು ಕೇವಲ 10 ಗಂಟೆಯ ಕಾರ್ಯಾಚರಣೆಯಲ್ಲಿ ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
Published: 16th February 2021 05:45 PM | Last Updated: 16th February 2021 05:45 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಶೀಘ್ರ ಶ್ರೀಮಂತನಾಗಬೇಕು ಎಂಬ ದುರಾಸೆಯಿಂದ ಗಟ್ಟಿ ಚಿನ್ನ ಕದ್ದು ಪರಾರಿಯಾಗಿದ್ದ ಕೆಲಸಗಾರನೋರ್ವನನ್ನು ಕೇವಲ 10 ಗಂಟೆಯ ಕಾರ್ಯಾಚರಣೆಯಲ್ಲಿ ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸ್ವಪ್ನೀಲ್ ಘಾಡ್ಗೆ (19) ಬಂಧಿತ ಆರೋಪಿ.
ಬಂಧಿತನಿಂದ 4,58,89,460 ರೂಪಾಯಿ ಮೌಲ್ಯದ 11.2 ಕೆಜಿ ಗಟ್ಟಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೀಘ್ರವೇ ಶ್ರೀಮಂತನಾಗಬೇಕು ಎಂಬ ದುರಾಸೆಯಿಂದ ಆರೋಪಿ ಸ್ವಪ್ನೀಲ್ ಈ ಕೃತ್ಯಕ್ಕೆ ಕೈ ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಸನ್ ಸ್ಕಾರ್ ರಿಪೈನರಿ ಎಂಟರ್ ಪ್ರೈಸಸ್ ನ ಮಾಲೀಕರು, ಜ.29ರಂದು ಸುಮಾರು 12 ಕೆಜಿ 700 ಗ್ರಾಂ ಚಿನ್ನ ಕರಗಿಸಿ, ಆ ದಿನವೇ ಚಿನ್ನವನ್ನು ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದರು. ನಂತರ ಜ.30ರಂದು ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಪ್ನಿಲ್, ತಮ್ಮ ಸಂಬಂಧಿಕರ ಮನೆಗೆ ತೆರಳಿ ಮಾಲೀಕರು ಬಂದಿದ್ದಾರೆ ಎಂದು ಸುಳ್ಳು ಹೇಳಿ ನಗರತ್ ಪೇಟೆಯ ಅಂಗಡಿಗೆ ತಂದು ನಂತರ ಅಲ್ಲಿಂದ ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹಲಸೂರು ಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಜ್ಮಾ ಪಾರೂಖಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.