ಮನೆ ಬಾಗಿಲಿಗೆ ಕಂದಾಯ ಇಲಾಖೆ, “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ”

ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಗಳಿಗೂ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಎಂಬ ನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

Published: 16th February 2021 07:54 PM  |   Last Updated: 16th February 2021 07:54 PM   |  A+A-


R Ashok

ಆರ್ ಅಶೋಕ್ (ಸಂಗ್ರಹ ಚಿತ್ರ)

Posted By : Lingaraj Badiger
Source : UNI

ಬೆಂಗಳೂರು: ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಗಳಿಗೂ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಎಂಬ ನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಫೆಬ್ರವರಿ 20ರಂದು ಕಂದಾಯ ಇಲಾಖೆಯ ಅಧಿಕಾರಿಗಳು ಹಳ್ಳಿಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆಯ ಗುಮಾಸ್ತರನ್ನು ಹೊರತುಪಡಿಸಿ ಉಳಿದ ಅಧಿಕಾರಿ ಸಿಬ್ಬಂದಿಗಳು ಪ್ರತಿ ತಿಂಗಳ ಮೂರನೇ ಶನಿವಾರದಂದು ಗ್ರಾಮಗಳಿಗೆ ಭೇಟಿ ನೀಡಿ, ಹಳ್ಳಿ ವಾಸ್ತವ್ಯ ಮಾಡಲಿದ್ದಾರೆ ಎಂದು ಹೇಳಿದರು.

ಹಳ್ಳಿಗಳಿಗೆ ಭೇಟಿ ನೀಡುವ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಹಳ್ಳಿಯ ಯಾವುದೇ ಮುಖ್ಯಸ್ಥರು, ಮುಖಂಡರ ಮನೆಯಲ್ಲಿ ಭೋಜನ, ಉಪಹಾರ ಸೇವಿಸುವಂತಿಲ್ಲ. ಸರ್ಕಾರಿ ಶಾಲೆಗಳಲ್ಲಿ, ಎಸ್,ಸಿ. ಹಾಗೂ ಎಸ್.ಟಿ. ವಸತಿ ನಿಲಯದಲ್ಲಿ ಭೊಜನ ಸ್ವೀಕರಿಸಬೇಕು. ಗ್ರಾಮಗಳಿಗೆ ಭೇಟಿ ನೀಡುವ ಒಂದು ವಾರದ ಮೊದಲೇ ಕಂದಾಯ ಅಧಿಕಾರಿಗಳು, ಗ್ರಾಮ ಭೇಟಿ ಸಂದರ್ಭದಲ್ಲಿ ನೀಡಲಾಗಿರುವ ಕಾರ್ಯಸೂಚಿಗಳನ್ವಯ ಫಲಾನುಭವಿಗಳ ಅರ್ಜಿಗಳನ್ನು ಸಂಗ್ರಹಿಸಿ, ಅರ್ಜಿಗಳ ಮೇಲೆ ಯಾರ ಹಂತದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಲೇವಾರಿಯಾಗಿರುವ ಬಗ್ಗೆ ಸಂಬಂಧಪಟ್ಟ ಫಲಾನುಭವಿಗಳಿಗೆ ತಿಳಿಸುವುದು. ಅರ್ಜಿಗಳ ಮೇಲೆ ಬೇರೆ ಬೇರೆ ಹಂತದಲ್ಲಿ ವಿಚಾರಣೆಯ ಅವಶ್ಯಕತೆ ಇದ್ದಲ್ಲಿ ಅದನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು. 

ಭೇಟಿ ನೀಡಿದ ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ 3 ಮತ್ತು ಅಕಾರ್ ಬಂದ್ ತಾಳೆಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು. ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಇದ್ದಲ್ಲಿ ಪರಿಹಾರ, ಪ್ರವಾಹದ ಹಾನಿ ತಡೆಗಟ್ಟಲು ಸಲಹೆ ನೀಡುವುದು. ಅತೀವೃಷ್ಠಿ, ಅನಾವೃಷ್ಠಿ ಎದುರಿಸಲು ಮುಂಜಾಗ್ರತೆ ಕ್ರಮ, ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ನಿಯಮಾನುಸಾರ ಕ್ರಮ ವಹಿಸಬೇಕು ಎಂದರು.

ಗ್ರಾಮದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸುವುದು. ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡಲಾಗುವುದು. ಮನೆಬಾಗಿಲಿಗೇ ಮಾಸಾಶನ ಸರ್ಕಾರವು ಸ್ವಯಂಪ್ರೇರಿತವಾಗಿ ನಾಗರಿಕರ ಆದಾಯ ಮತ್ತು ವಯೋಮಿತಿ ಆಧರಿಸಿ ಮನೆಬಾಗಿಲಲ್ಲೇ ನವೋದಯ ಮೊಬೈಲ್ ಆ್ಯಪ್ ಮೂಲಕ ಅರ್ಹ ಫಲಾನುಭಿಗಳನ್ನು ಗುರುತಿಸಿ ಪಿಂಚಣಿ ಮಂಜೂರು ಮಾಡುವ ಬೃಹತ್ ಅಭಿಯಾನವಾಗಿದೆ. ಇದರೊಂದಿಗೆ ಪ್ರಸ್ತುತ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಸಮಗ್ರ ಪರಿಶೀಲನೆ ಮತ್ತು ಪರಿಷ್ಕರಣೆಯಾಗುತ್ತದೆ ಎಂದು ಸಚಿವ ಆರ್. ಅಶೋಕ್ ಹೇಳಿದರು. 

ಕುಟುಂಬ ದತ್ತಾಂಶದ ಮೂಲಕ ಪಡೆಯಲಾದ ಆದಾಯ ಹಾಗೂ ವಯೋಮಿತಿ ಮಾಹಿತಿ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅರ್ಜಿ ರಹಿತವಾಗಿ ಮನೆಬಾಗಿಲೆಗೆ ಪಿಂಚಣಿ ಸೌಲಭ್ಯ ತಲುಪಿಸಲಾಗುತ್ತದೆ. ನವೋದಯ ಆ್ಯಪ್ ಕುರಿತಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಉಡುಪಿ, ಬಳ್ಳಾರಿ ಜಿಲ್ಲೆಯಲ್ಲಿ ಮನೆಬಾಗಿಲಿಗೆ ಮಾಸಾಶನ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿರುವ ತಾಂಡ, ಹಟ್ಟಿ, ದೊಡ್ಡಿ, ಮಜರೆ, ಹಾಡಿ, ಕಾಲೋನಿ ಹಾಗೂ ಇನ್ನಿತರೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 2,741 ದಾಖಲೆ ರಹಿತ ಜನ ವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಗುರುತಿಸಲಾಗಿದೆ. ಆದರೆ ಇನ್ನೂ ಹಲವು ಅರ್ಹ ಪ್ರದೇಶಗಳನ್ನು ಗುರುತಿಸದೇ ಕೈಬಿಡಲಾಗಿದೆ. ಎಲ್ಲಾ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಅರ್ಹವಿರುವ ಜನವಸತಿಗಳು ಕೈಬಿಟ್ಟು ಹೋಗಿದ್ದಲ್ಲಿ ಕೂಡಲೇ ಅಂತಹ ಜನವಸತಿ ಪ್ರದೇಶಗಳನ್ನು ನಿಯಮಾನುಸಾರ ಗುರುತಿಸಿ 60 ದಿನಗಳ ಒಳಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಫೆಬ್ರವರಿ 20 ರಂದು ದೊಡ್ಡಬಳ್ಳಾಪುರದ ಹೊಸಹಳ್ಳಿಯಲ್ಲಿ 11 ಗಂಟೆಗೆ ಸಚಿವರು ಭೇಟಿ ಕೊಟ್ಟು ಎತ್ತಿನಗಾಡಿಯಲ್ಲಿ ಗ್ರಾಮದೇವತೆ ದರ್ಶನ ಪಡೆದು, ದಲಿತ ಕಾಲೋನಿಯಲ್ಲಿ 1 ಗಂಟೆಗಳ ಕಾಲ ದಲಿತ ಕೇರಿ ಸಮಸ್ಯೆಗಳನ್ನು ಆಲಿಸಿ ಅಲ್ಲೇ ಸೂಕ್ತ ಪರಿಹಾರ ನೀಡಲು ಕ್ರಮವಹಿಸಲಾಗುತ್ತದೆ. 12 ರಿಂದ 1-30 ಗಂಟೆಯವರೆಗೆ ಹಳ್ಳಿಯ ರಸ್ತೆಗಳ ಮೂಲಕ ನಡೆದು ಕಟ್ಟೆಗಳಲ್ಲಿ ಕುಳಿತು ಜನರ ಸಮಸ್ಯೆಯನ್ನು ಆಲಿಸಲಾಗುತ್ತದೆ. 3 ಗಂಟೆಗೆ ಆರೋಗ್ಯ ಶಿಬಿರದ ಮೂಲಕ ಅಂಗವಿಕಲರಿಗೆ ಕೈ, ಕಾಲು ಇಲ್ಲದವರಿಗೆ ಕೃತಕ ಕೈ, ಕಾಲು ಜೋಡಣೆಯನ್ನು ಮಾಡಲಾಗುತ್ತದೆ. 4 ರಿಂದ 5 ಗಂಟೆಯವರೆಗೆ ಜನಪ್ರತಿನಿಧಿಗಳ ಜೊತೆ ಮಾತನಾಡಿ ಗ್ರಾಮದ ಜನರ ಸಮಸ್ಯೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಲಾಗುವುದು. ರಾತ್ರಿ 7 ಗಂಟೆಗೆ ಗ್ರಾಮದ ಕಲಾವಿದರ ಗ್ರಾಮದ ಪ್ರದರ್ಶನವನ್ನು ವೀಕ್ಷಿಸಿ ಗ್ರಾಮದ ಹಿಂದುಳಿದ ಹಾಸ್ಟೆಲ್ ನಲ್ಲಿ ವಾಸ್ತವ್ಯ ಮಾಡಲಾಗುತ್ತದೆ. ಮಾರನೆಯ ದಿನ ದಲಿತರ ಮನೆಯಲ್ಲಿ ತಿಂಡಿ ಮಾಡುತ್ತೇನೆ ಎಂದು ತಿಳಿಸಿದರು.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp