
ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ಹಾವೇರಿಯಲ್ಲಿರುವ ಗುಜರಾತ್ ಅಂಬುಜಾ ರಫ್ತು ಘಟಕ ಸ್ಥಗಿತಗೊಳಿಸುವುದಕ್ಕೆ ಲೋಕಾಯುಕ್ತರು ಆದೇಶ ನೀಡಿದ್ದಾರೆ.
ಗುಜರಾತ್ ಅಂಬುಜಾ ರಫ್ತು ಘಟಕದಿಂದ ರೈತರು ಹಾಗೂ ಪರಿಸರದ ಮೇಲೆ ತೀವ್ರ ಪರಿಣಾಮಗಳಾಗುತ್ತಿದ್ದು, ಕಂಪನಿಯನ್ನು ಸ್ಥಗಿತಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ಗೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಹಾವೇರಿಯ ಡೆಪ್ಯುಟಿ ಕಮಿಷನರ್ ಗೂ ನಿರ್ದೇಶನ ನೀಡಿದ್ದು, ಕೈಗಾರಿಕೆಯಿಂದ ಉಂಟಾಗುತ್ತಿರುವ ಮಾಲಿನ್ಯ ಹಾಗೂ ಹಾನಿಗೆ ಸಂಬಂಧಿಸಿದ ದೂರುಗಳೆಡೆಗೆ ಗಮನ ಹರಿಸಿ, ಸಂತ್ರಸ್ತರಿಗೆ ಮಾಲಿನ್ಯಕಾರಕ ನಿಯಮಗಳಿಗೆ ಅನುಗುಣವಾಗಿ ಪಾವತಿಸಬೇಕಾದ ಪರಿಹಾರವನ್ನು ನೀಡುವಂತೆ ಸೂಚನೆ ನೀಡಿದ್ದಾರೆ.
ಅಂಬುಜ ರಫ್ತು ಘಟಕದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿಯ ಪ್ರಮಾಣವದ ಬಗ್ಗೆ ಮಾಹಿತಿ ನೀಡುವಂತೆಯೂ ಲೋಕಾಯುಕ್ತರು ಸೂಚನೆ ನೀಡಿದ್ದಾರೆ. ಹುಲಸೋಲಿಯ ಗಡಿಗೆಪ್ಪ ಫಕ್ಕೀರಪ್ಪ ಮಲಸಲಿ ಎಂಬುವವರು 2017 ರಲ್ಲಿ ಕೆಎಸ್ ಪಿಸಿಬಿ ಅಧ್ಯಕ್ಷರು ಸ್ಥಳೀಯ ಪರಿಸರ ಅಧಿಕಾರಿ ಹಾಗೂ ಗುಜರಾತ್ ಅಂಬುಜಾ ಎಕ್ಸ್ ಪೋರ್ಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇನ್ನೆರಡು ತಿಂಗಳುಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಡೆಪ್ಯುಟಿ ಕಮಿಷನರ್ ಗೆ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ.