8,000 ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುತ್ತದೆ: ಡಿಸಿಎಂ ಅಶ್ವತ್ಥ್ ನಾರಾಯಣ್
ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ 8,000 ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.
Published: 18th February 2021 08:20 AM | Last Updated: 18th February 2021 01:25 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ 8,000 ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿಎನ್. ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಈ ಹುದ್ದೆಗಳ ಭರ್ತಿ ಅಗತ್ಯವಾಗಿದೆ. ಅಲ್ಲದೆ 12 ಸಾವಿರ ಬೋಧಕೇತರ ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಬೇಕೆಂಬ ಬೇಡಿಕೆ ಇಲಾಖೆ ಮುಂದಿದ್ದು, ತುರ್ತು ಅಗತ್ಯದ ಹುದ್ದೆಗಳನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಶಿಕ್ಷಣ ಇಲಾಖೆ ಆಧ್ಯತೆ ನೀಡಿದೆ ಎಂದು ಹೇಳಿದ್ದಾರೆ.
ಉನ್ನತ ಶಿಕ್ಷಣದ ನಿಗದಿತ ಅನುದಾನ ಪ್ರಮಾಣವನ್ನು ಶೇಕಡ.2 ರಿಂದ ಶೇಕಡ.3.5 ಕ್ಕೆ ಹೆಚ್ಚಿಸಬೇಕು, ಜಿಎಸ್ಡಿಪಿಯ ಮೊತ್ತ ಶೇಕಡ.0.5 ರಿಂದ 1 ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಬಜೆಟ್ ಪೂರ್ವ ಚರ್ಚೆ ಕಾಲಕ್ಕೆ ಮುಖ್ಯಮಂತ್ರಿ ರವರ ಮುಂದೆ ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಶೈಕ್ಷಣಿಕ ವರ್ಷ ಕಾರ್ಯನಿರ್ವಹಿಸಿದ್ದ ಅತಿಥಿ ಉಪನ್ಯಾಸಕರೇ ಈ ವರ್ಷ ಕೂಡ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಅತಿಥಿ ಉಪನ್ಯಾಸಕರು ವೇತನ ಹೆಚ್ಚಳ ಮತ್ತು ಉದ್ಯೋಗಗಳನ್ನು ಕ್ರಮಬದ್ಧಗೊಳಿಸುವಂತೆ ಒತ್ತಾಯಿಸಿದ್ದಾರೆ. ಅವರ ಬೇಡಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.
ಸರ್ಕಾರಿ ಕಾಲೇಜುಗಳೂ ರಾಷ್ಟ್ರೀಯ ಮೌಲ್ಯಾಂಕನಾ ಹಾಗೂ ಮಾನ್ಯತಾ ಸಂಸ್ಥೆಯ (ಎನ್ಎಎಸಿ) ಮಾನ್ಯತೆ ಪಡೆಯಬೇಕಿದ್ದು, ಆರ್ಥಿಕ ಮತ್ತು ಶೈಕ್ಷಣಿಕ ಸ್ವಾಯತ್ತತೆಯತ್ತ ಕೆಲಸ ಮಾಡಬೇಕಿದೆ. ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಬೇಕಿದೆ. ಇದಕ್ಕಾಗಿ ಬೋಧನಾ ಗುಣಮಟ್ಟವನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.