ತಂಬಾಕು ಉತ್ಪನ್ನಗಳು ಮಕ್ಕಳ ಕೈಗೆ ಸಿಗದಂತೆ ಮಾಡಲು ‘ಮಾರಾಟಗಾರರ ಪರವಾನಗಿ’ ಕಡ್ಡಾಯ ಮಾಡಿ: ತಜ್ಞರ ಅಭಿಮತ

ತಂಬಾಕು ಉತ್ಪನ್ನಗಳು ಮಕ್ಕಳ ಕೈಗೆ ಸಿಗದಂತೆ ಮಾಡಲು ‘ಮಾರಾಟಗಾರರ ಪರವಾನಗಿ’ ಕಡ್ಡಾಯ ಮಾಡಲು ಮಕ್ಕಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ಒತ್ತಾಯಿಸಿದ್ದಾರೆ.

Published: 18th February 2021 01:42 PM  |   Last Updated: 18th February 2021 01:42 PM   |  A+A-


Ban sell tobacco products

ಶಾಲಾ ಮಕ್ಕಳಿಂದ ತಂಬಾಕು ವಿರೋಧಿ ಅಭಿಯಾನ

Posted By : Srinivasamurthy VN
Source : Online Desk

ಬೆಂಗಳೂರು: ತಂಬಾಕು ಉತ್ಪನ್ನಗಳು ಮಕ್ಕಳ ಕೈಗೆ ಸಿಗದಂತೆ ಮಾಡಲು ‘ಮಾರಾಟಗಾರರ ಪರವಾನಗಿ’ ಕಡ್ಡಾಯ ಮಾಡಲು ಮಕ್ಕಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ಒತ್ತಾಯಿಸಿದ್ದಾರೆ.

ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳು ಕೈಗೆಟುಕದಂತೆ ಮಾಡುವ ಉದ್ದೇಶದಿಂದ, ಸಾರ್ವಜನಿಕ ಆರೋಗ್ಯ ತಜ್ಞರು, ಶಿಕ್ಷಣ ತಜ್ಞರು, ಪೋಷಕರು ಮತ್ತು ಮಕ್ಕಳು ಕರ್ನಾಟಕದಲ್ಲಿ ತಂಬಾಕು ಮಾರಾಟಕ್ಕೆ ‘ಮಾರಾಟಗಾರರ ಪರವಾನಗಿ’ ಕಡ್ಡಾಯ ಮಾಡಿ ಆದೇಶ ಹೊರಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಕೂಡಲೇ ಅಧಿಸೂಚನೆ ಹೊರಡಿಸಿ ‘ಮಾರಾಟಗಾರರ ಪರವಾನಗಿ’ಯನ್ನು ಶೀಘ್ರವೇ ಜಾರಿಗೆ ತರಬೇಕೆಂದು ತಜ್ಞರು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯನ್ನು ಒತ್ತಾಯಿಸಿದ್ದಾರೆ. 

ಈ ಕುರಿತಂತೆ ನಗರದ ಪ್ರೆಸ್ ಕ್ಲಬ್ ನಲ್ಲಿ ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕ (ಸಿಎಫ್‌ಟಿಎಫ್‌ಕೆ) ಮತ್ತು ಕರ್ನಾಟಕದ ಖಾಸಗಿ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ (ಕೆಎಎಂಎಸ್) ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಕ್ಕಳು, ಸಾರ್ವಜನಿಕ ಆರೋಗ್ಯ ತಜ್ಞರು, ಪೋಷಕರು ಮತ್ತು ಶಿಕ್ಷಕರು ಪಾಲ್ಗೊಂಡು ತಂಬಾಕು ಉತ್ಪನ್ನಗಳು ಮಕ್ಕಳ ಕೈಗೆ ಸಿಗದಂತೆ ಮಾಡಲು ‘ಮಾರಾಟಗಾರರ ಪರವಾನಗಿ’ ಕಡ್ಡಾಯ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.   

‘ಮಾರಾಟಗಾರರ ಪರವಾನಗಿ’ಯ ಶೀಘ್ರ ಜಾರಿಗೆ ಒತ್ತಾಯಿಸಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೆ ಈವರೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು 3,000ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ 21 ಸೆಪ್ಟೆಂಬರ್, 2017 ರಂದು (D O No. P – 16012 /14 /2017 –TC) ನೀಡಿರುವ ಸೂಚನೆಯಂತೆ ಸೂಕ್ತ ಅನುಮತಿ ಮತ್ತು ತಂಬಾಕು ಮಾರಾಟಗಾರರ ನೋಂದಣಿ ಮೂಲಕ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸಲು ಹೇಳಿದೆ.  ಕಠಿಣ ನಿಯಮಗಳ ಅನುಪಸ್ಥಿತಿಯಲ್ಲಿ ತಂಬಾಕು ಉತ್ಪನ್ನಗಳಾದ ಸಿಗರೇಟ್, ಬೀಡಿ ಮತ್ತು ಜಗಿಯುವ ತಂಬಾಕು ವಸ್ತುಗಳನ್ನು ರಾಜ್ಯದ ಮೂಲೆಮೂಲೆಗಳಲ್ಲಿ ಗೂಡಂಗಡಿ, ಚಿಲ್ಲರೆ ಅಂಗಡಿ, ಮಿಲ್ಕ್ ಪಾರ್ಲರ್, ಕಾಫಿ-ಟೀ ಅಂಗಡಿ, ಬೇಕರಿ ಮತ್ತು ಇತರೆ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ತಂಬಾಕು ಉದ್ಯಮ ಕಾನೂನುಬಾಹಿರವಾಗಿ ಪ್ರಕಾಶಮಾನ ಬೋರ್ಡ್ ಮತ್ತು ಪೋಸ್ಟರ್‍ಗಳ ಮೂಲಕ ತಮ್ಮ ಉತ್ಪನ್ನಗಳ ಜಾಹೀರಾತು ಮಾಡುತ್ತವೆ. ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳಲ್ಲಿ (ಪಾಯಿಂಟ್ ಆಫ್ ಸೇಲ್) ತಂಬಾಕು ಕಂಪೆನಿಗಳ ತಂತ್ರದಂತೆ ಮಕ್ಕಳು ಸಹಜ ಮತ್ತು ಸಾಮಾನ್ಯವಾಗಿ ಖರೀದಿಸುವಂತಹ ತಿನಿಸುಗಳಾದ ಬಿಸ್ಕತ್ತು, ಮಿಠಾಯಿ, ಚಿಪ್ಸ್, ಇತ್ಯಾದಿಗಳ ಪಕ್ಕದಲ್ಲಿ ತಂಬಾಕು ಪದಾರ್ಥಗಳನ್ನು ಇರಿಸಲಾಗುತ್ತಿದೆ.

ಯುವಜನರಲ್ಲಿ ತಂಬಾಕಿನ ಸೇವನೆ ಮತ್ತು ಚಟಕ್ಕೆ ತಂಬಾಕು ಉತ್ಪನ್ನಗಳ ಸುಲಭ ಲಭ್ಯತೆ, ವಿಶೇಷವಾಗಿ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ದೊರೆಯುವಿಕೆ, ಮುಖ್ಯ ಕಾರಣಗಳಲ್ಲೊಂದಾಗಿದೆ. ಹದಿಹರೆಯದ ವಯಸ್ಸಿನಲ್ಲೇ ವ್ಯಸನಗಳಿಗೆ ಹೆಚ್ಚು ತುತ್ತಾಗುವುದರಿಂದ ತಂಬಾಕು ಕಂಪನಿಗಳು ಮಕ್ಕಳನ್ನು ಗುರಿಯಾಗಿಸುತ್ತವೆ ಎಂಬುದು ಸಾಬೀತಾಗಿದ್ದು, ತರ್ಕಬದ್ಧ ನಿರ್ಧಾರ ತೆಗೆದುಕೊಳ್ಳುವಲ್ಲಿ ಮಕ್ಕಳ ಅಸಮರ್ಥತೆಯ ಲಾಭ ಪಡೆದು, ಅವರು ತಮ್ಮ ಉತ್ಪನ್ನಗಳೊಂದಿಗೆ ಪ್ರಯೋಗ ಮಾಡಿ ವ್ಯಸನಿಗಳಾಗುವಂತೆ ತಂಬಾಕು ಕಂಪನಿಗಳು ಮಾಡುತ್ತಿವೆ. ಭಾರತದಲ್ಲಿ ಶೇ. 14.6 ಕ್ಕಿಂತಲೂ ಹೆಚ್ಚು ಹದಿಹರೆಯದವರು (13-15 ವರ್ಷದವರು) ಯಾವುದಾದರೊಂದು ರೀತಿಯಲ್ಲಿ ತಂಬಾಕನ್ನು ಬಳಸುತ್ತಾರೆ (GYTS). ಅದರಂತೆ, ಪ್ರತಿದಿನ 5,500ಕ್ಕೂ ಹೆಚ್ಚು ಮಕ್ಕಳು ತಂಬಾಕು ಬಳಕೆಯನ್ನು ಆರಂಭಿಸುತ್ತಿದ್ದಾರೆ.

ರಾಜ್ಯ ಅಬಕಾರಿ ಇಲಾಖೆ ಪರವಾನಗಿ ಮೂಲಕ ಮದ್ಯ ಮಾರಾಟವನ್ನು ಹೇಗೆ ನಿಯಂತ್ರಿಸುತ್ತದೋ, ಹಾಗೆಯೇ ‘ಮಾರಾಟಗಾರರ ಪರವಾನಗಿ’ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸುತ್ತದೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಇಚ್ಛಿಸುವವರು ಕೇವಲ ‘ವ್ಯಾಪಾರ ಪರವಾನಗಿ’ ಮಾತ್ರವಲ್ಲದೆ, ಆಯಾ ನಗರ ಸ್ಥಳೀಯ ಸಂಸ್ಥೆಗಳಿಂದ ‘ವಿಶೇಷ ಪರವಾನಗಿ’ ಪಡೆಯಬೇಕು. ಇದರಿಂದ ಸಾಮಾನ್ಯವಾಗಿರುವ ತಂಬಾಕು ನಿಯಂತ್ರಣ ಕಾನೂನುಗಳ ಉಲ್ಲಂಘನೆಗಳನ್ನು ಪರಿಶೀಲಿಸಲು ಸ್ಥಳೀಯ ಸಂಸ್ಥೆಗಳಿಗೆ ಸಹಾಯಕವಾಗುತ್ತದೆ. ‘ಮಾರಾಟಗಾರರ ಪರವಾನಗಿ’ ಜಾರಿಗೊಳಿಸಲು ಸಾರ್ವಜನಿಕ ಆರೋಗ್ಯ ತಜ್ಞರು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ತಂಬಾಕು ಉತ್ಪನ್ನಗಳ ಸುಲಭ ಲಭ್ಯತೆಯನ್ನು ತಡೆಗಟ್ಟಿ ಯುವಕರನ್ನು ಆಮಿಷಕ್ಕೆ ಒಡ್ಡುವ ತಂತ್ರಗಳಿಗೆ ಅಂತ್ಯ ಹಾಡಬಹುದು. "ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದ್ದರೂ ತಂಬಾಕು ಉದ್ಯಮವು ಅದನ್ನು ಅಗತ್ಯವೆನ್ನುವಂತೆ ಸೇವಿಸಲು ನಮ್ಮನ್ನುದಿಕ್ಕುತಪ್ಪಿಸಿದೆ. ಇದು ಯುವಜನರನ್ನು ಗುರಿಯಾಗಿಸಿಕೊಂಡು ಹೆಣೆದಿರುವ ಮಾರುಕಟ್ಟೆ ತಂತ್ರದ ಫಲ. ಮಾರಾಟಗಾರರ ಪರವಾನಗಿಯು ಈ ಶೋಷಣೆಯ ವಿರುದ್ಧ ಗುರಾಣಿಯಾಗಲಿದ್ದು ಈ ದೇಶದ ರಚನಾತ್ಮಕ ಭವಿಷ್ಯಕ್ಕೆ ಅವಶ್ಯಕವಾಗಿದೆ, ಎಂದು ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ನಾರ್ಥ್ ನ 12ನೇ ತರಗತಿ ವಿದ್ಯಾರ್ಥಿ ಆದಿತ್ಯ ಹರಿ ಹೇಳಿದರು. 

ಬಳಿಕ ಮಾತನಾಡಿದ ಪ್ರಸಿದ್ಧ ಕ್ಯಾನ್ಸರ್ ತಜ್ಞರು ಮತ್ತು ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕದ (ಸಿಎಫ್‍ಟಿಎಫ್‍ಕೆ) ಸಲಹೆಗಾರರಾದ ಡಾ. ರಮೇಶ್ ಬಿಳಿಮಗ್ಗ  ಅವರು, 'ಮಕ್ಕಳು ತಂಬಾಕು ಉದ್ಯಮದ ಮುಖ್ಯ ಗುರಿಯಾಗಿದೆ. ತಂಬಾಕು ಉತ್ಪನ್ನಗಳ ಸುಲಭ ಲಭ್ಯತೆ ಯುವಜನರು ತಂಬಾಕಿನೊಂದಿಗೆ ಪ್ರಯೋಗಕ್ಕಿಳಿಯಲು ಆಮಿಷವಾಗಿದ್ದು, ಅಂತಿಮವಾಗಿ ಅದಕ್ಕೆ ವ್ಯಸನಿಯಾಗುತ್ತಾರೆ. ಇದು ಬಹಳ ಅಪಾಯಕಾರಿ. ಯುವಪೀಳಿಗೆಯನ್ನು ತಂಬಾಕು ಉತ್ಪನ್ನಗಳಿಂದ ದೂರವಿರಿಸುವ ತುರ್ತು ಎದುರಾಗಿದೆ. ಮಾರಾಟಗಾರರ ಪರವಾನಗಿ ರಾಜ್ಯ ಸರ್ಕಾರದ ದಿಟ್ಟ ಹೆಜ್ಜೆಗಳಲ್ಲೊಂದಾಗಿದ್ದು, ಇದರಿಂದ ತಂಬಾಕು ಮಾರಾಟದ ಮೇಲೆ ನಿಗಾ ಮತ್ತು ನಿಯಂತ್ರಣ ಸಾಧ್ಯವಾಗುವುದಲ್ಲದೆ, ಯುವಜನರನ್ನು ವ್ಯಸನದಿಂದ ರಕ್ಷಿಸಬಹುದು ಎಂದು ತಿಳಿಸಿದರು.

ಶ್ರೀ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕೆಎಎಂಎಸ್), ಅವರು ಮಾತನಾಡಿ, 'ಮಾರಾಟಗಾರರ ಪರವಾನಗಿ ಜಾರಿಗೆ ಬಂದರೆ, ‘ಬಿಡಿ’ ಸಿಗರೇಟ್ ಮತ್ತು ಬೀಡಿಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಪ್ರಸ್ತುತ, ನಿಯಮಗಳನ್ನು ಉಲ್ಲಂಘಿಸಿ ತಂಬಾಕು ಉತ್ಪನ್ನಗಳನ್ನು (ವಿಶೇಷವಾಗಿ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ) ಮಾರಾಟ ಮಾಡುತ್ತಿರುವವರು ಸಣ್ಣ ಮೊತ್ತದ ದಂಡ ಕಟ್ಟಿ ಬಚಾವಾಗುತ್ತಿದ್ದಾರೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಅಔಖಿPಂ), 2003ರ ಅನ್ವಯ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ಮಾರಾಟಗಾರರ ಪರವಾನಗಿಯನ್ನು ಸಹ ರದ್ದುಗೊಳಿಸಬಹುದು ಎಂದರು.

“ಮಾರಾಟಗಾರರ ಪರವಾನಗಿ ಪ್ರಕ್ರಿಯೆ ಆರಂಭಿಸಿದಕ್ಕೆ ನಾವು ರಾಜ್ಯ ಸರ್ಕಾರವನ್ನು ಪ್ರಶಂಸಿಸುತ್ತೇವೆ ಮತ್ತು ಇದನ್ನು ಕೂಡಲೇ ಕಾರ್ಯಗತಗೊಳಿಸಬೇಕೆಂದು ಒತ್ತಾಯಿಸುತ್ತೇವೆ. ಮಾರಾಟಗಾರರ ಪರವಾನಗಿ ಜಾರಿಯಾದರೆ ರೈತರು ಮತ್ತು ಮಾರಾಟಗಾರರ ಜೀವನೋಪಾಯಕ್ಕೆ ತೊಂದರೆಯಾಗಲಿದೆ ಎಂದು ತಂಬಾಕು ಉದ್ಯಮವು ಬಿಂಬಿಸುತ್ತಾ ಬಂದಿರುವುದರಿಂದ ಮತ್ತು ಅದು ಸುಳ್ಳಾಗಿರುವುದರಿಂದ, ಪೋಷಕರು, ಶಿಕ್ಷಕರು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಆಸಕ್ತಿಯುಳ್ಳವರು ನಗರಾಭಿವೃದ್ಧಿ ಇಲಾಖೆಗೆ ಪತ್ರಗಳನ್ನು ಬರೆಯುವ ಮೂಲಕ ಬೆಂಬಲ ವ್ಯಕ್ತಪಡಿಸಬೇಕೆಂದು ವಿನಂತಿಸುತ್ತೇವೆ. ಈಗಾಗಲೇ ಹಿಮಾಚಲ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಾಖರ್ಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಮಾರಾಟಗಾರರ ಪರವಾನಗಿಯನ್ನು ಜಾರಿಗೆ ತರುವ ಮೂಲಕ ಆದರ್ಶಪ್ರಾಯವಾಗಿವೆ ಎಂದು ಸಿಎಫ್‍ಟಿಎಫ್‍ಕೆ ಸಂಚಾಲಕರಾದ ಎಸ್ ಜೆ ಚಂದರ್ ತಿಳಿಸಿದರು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp