ಮೀಸಲಾತಿ ಹೋರಾಟ, ಈಗ ಒಕ್ಕಲಿಗರ ಸರದಿ: ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಸಭೆ
ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯ ಕೂಡ ಮೀಸಲಾತಿಗಾಗಿ ಹೋರಾಟ ನಡೆಸಲು ಮುಂದಾಗಿದೆ.
Published: 18th February 2021 08:01 AM | Last Updated: 18th February 2021 01:25 PM | A+A A-

ನಿರ್ಮಲಾನಂದನಾಥ ಸ್ವಾಮೀಜಿ
ಬೆಂಗಳೂರು: ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯ ಕೂಡ ಮೀಸಲಾತಿಗಾಗಿ ಹೋರಾಟ ನಡೆಸಲು ಮುಂದಾಗಿದೆ.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಆದಿಚುಂಚನಗಿರಿ ವಿಜಯನಗರ ಶಾಖಾ ಮಠದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಸಂಬಂಧ ವಿಸ್ತೃತ ಚರ್ಚೆ ನಡೆದಿದೆ. ಮೀಸಲಾತಿ ಹೆಚ್ಚಳ ವಿಷಯದಲ್ಲಿ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಸಭೆ ತೀರ್ಮಾನಿಸಿತು. ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ಮತ್ತು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಿತಿಗಳನ್ನು ರಚಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ.
ಮೀಸಲಾತಿ ಪಟ್ಟಿಯಲ್ಲಿ ಪರಿಷ್ಕರಣೆ, ಬದಲಾವಣೆ ಹಾಗೂ ಪ್ರಮಾಣ ಹೆಚ್ಚಳ ಮಾಡುವುದು, ಒಕ್ಕಲಿಗ ಸಮುದಾಯದ ಎಲ್ಲಾ 115 ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ
ಸೇರ್ಪಡೆ ಮಾಡುವುದು ಪ್ರಮುಖ ಬೇಡಿಕೆಯಾಗಿದೆ. ಈ ಉಪಜಾತಿಗಳನ್ನು ಸೇರಿಸಿದ ಕಾರಣ ಅವರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದ ಅವರು ಒಕ್ಕಲಿಗ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿದ್ದಾರೆ.
‘ನಗರ ಪ್ರದೇಶದ ಒಕ್ಕಲಿಗ ಸಮುದಾಯ ಸಂಕಷ್ಟದಲ್ಲಿದ್ದು, ಅವರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು. ಹಾಗಾಗಿ ಗ್ರಾಮೀಣ ಒಕ್ಕಲಿಗ ಮತ್ತು ನಗರ ಪ್ರದೇಶದ ಒಕ್ಕಲಿಗ ಎಂಬ ತಾರತಮ್ಯ ಇಲ್ಲದೆ ಎಲ್ಲರಂತೆ ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ದೊರಕಬೇಕು’ ಎಂದು ಹೇಳಿದರು.