ಕಂದರಕ್ಕೆ ಬಿದ್ದ ಮದುವೆ ಬಸ್; ಇಬ್ಬರು ಸಾವು, 40 ಕ್ಕೂ ಹೆಚ್ಚು ಮಂದಿಗೆ ಗಾಯ!
ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಸ್ ಕಂದರಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿ, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸಿರಾ-ಬುಕ್ಕಾಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
Published: 19th February 2021 02:30 AM | Last Updated: 19th February 2021 02:30 AM | A+A A-

ಶಿರಾ ಬಳಿ ಬಸ್ ಅಪಘಾತ
ತುಮಕೂರು: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಸ್ ಕಂದರಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿ, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶಿರಾ-ಬುಕ್ಕಾಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಫೆ.18 ರಂದು ರಾತ್ರಿ 8:30 ರ ವೇಳೆಗೆ ಈ ಅಪಘಾತ ಸಂಭವಿಸಿದ್ದು, ಬಸ್ ನಲ್ಲಿದ್ದವರು ಬಂಗರಹಟ್ಟಿ ಗೊಲ್ಲರಹಟ್ಟಿಗೆ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಖಾಸಗಿ ಬಸ್ ನಲ್ಲಿ ಹೊರಟಿದ್ದರು. ಈ ಬಸ್ ನಲ್ಲಿ 50 ಕ್ಕೂ ಹೆಚ್ಚು ಮಂದಿ ಇದ್ದು 41 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಮೃತರನ್ನು ಕೊರಟಗೆರೆ ತಾಲೂಕಿನ, ತೋವಿನಕೆರೆಯ ಗೊಲ್ಲರಹಟ್ಟಿಯ ಬಳಿ ಇರುವ ಶಂಭೋನಹಳ್ಳಿಯ ಕಿಟ್ಟಪ್ಪ (46) ಹಾಗೂ ಆತನ ಪತ್ನಿ ಭಾಗ್ಯಮ್ಮ (40) ಎಂದು ಗುರುತಿಸಲಾಗಿದೆ.
ಶಿರಾ ಬಳಿ ಇರುವ ಮೇಕೇರಹಟ್ಟಿ ಬಳಿ ತಿರುವು ಇದ್ದು, ಈ ಪ್ರದೇಶದಲ್ಲಿ ಹೆಚ್ಚು ಅನುಭವ ಇಲ್ಲದ ಚಾಲಕರಿಗೆ ದುರ್ಗಮವಾದ ಪ್ರದೇಶ ಇದಾಗಿದೆ. ಆದ ಕಾರಣ ಹೆಚ್ಚಿನ ಅಪಘಾತಗಳು ಸಂಭವಿಸುವ ಜಾಗ ಇದಾಗಿದೆ.
ಗಾಯಾಳುಗಳು ಹಾಗೂ ತೀವ್ರ ಗಂಭೀರ ಸ್ಥಿತಿಯಲ್ಲಿರುವ ಓರ್ವನನ್ನು ಸಿರಾ ಹಾಗೂ ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
41 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, 11 ಮಂದಿಗೆ ಹಲವೆಡೆ ಮೂಳೆ ಮುರಿತಕ್ಕೊಳಗಾಗಿ ಸಿರಾದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿನಾಯಕ ಖಾಸಗಿ ಬಸ್ ನಲ್ಲಿ ವಿವಾಹ ಕಾರ್ಯಕ್ರಮಕ್ಕೆ ತೆರಳುವವರು ಪ್ರಯಾಣಿಸುತ್ತಿದ್ದರು. ಗಾಯಾಳುಗಳಿಗೆ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಕ್ಕಾಗಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ. ಘಟನಾ ಸ್ಥಳಕ್ಕೆ ಧಾವಿಸಿದ ಸಿರಾ ಟೌನ್ ನ ಸರ್ಕಲ್ ಇನ್ಸ್ ಪೆಕ್ಟರ್ ಹನುಮಂತಪ್ಪ ಹಾಗೂ ಗ್ರಾಮೀಣ ವಿಭಾಗದ ರವಿಕುಮಾರ್ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.