ಕಬ್ಬಿಣದ ಬ್ಯಾರಿಕೇಡ್ ಅನ್ನೇ ಮುರಿದ ಚಾಲಾಕಿ ಆನೆಗಳು, ಉಲ್ಟಾ ಹೊಡೆದ ತಜ್ಞರ ಮಾಸ್ಟರ್ ಪ್ಲಾನ್!
ಆನೆ ಮತ್ತು ಮನಷ್ಯರ ನಡುವಿನ ಸಂಘರ್ಷ ನಿಯಂತ್ರಣಕ್ಕೆ ಕಬ್ಬಿಣದ ಬ್ಯಾರಿಕೇಡ್ ಗಳು ನೆರವಾಗುತ್ತವೆ ಎಂಬ ತಜ್ಞರ ಮಾಸ್ಟರ್ ಪ್ಲಾನ್ ಅನ್ನೇ ಕಾಡಾನೆಗಳು ಬುಡಮೇಲು ಮಾಡಿವೆ.
Published: 20th February 2021 02:11 PM | Last Updated: 20th February 2021 02:11 PM | A+A A-

ರೈಲ್ವೇ ಬ್ಯಾರಿಕೇಡ್ ಗಳನ್ನೇ ಮುರಿದು ಹಾಕಿರುವ ಆನೆಗಳು
ಬೆಂಗಳೂರು: ಆನೆ ಮತ್ತು ಮನಷ್ಯರ ನಡುವಿನ ಸಂಘರ್ಷ ನಿಯಂತ್ರಣಕ್ಕೆ ಕಬ್ಬಿಣದ ಬ್ಯಾರಿಕೇಡ್ ಗಳು ನೆರವಾಗುತ್ತವೆ ಎಂಬ ತಜ್ಞರ ಮಾಸ್ಟರ್ ಪ್ಲಾನ್ ಅನ್ನೇ ಕಾಡಾನೆಗಳು ಬುಡಮೇಲು ಮಾಡಿವೆ.
ಹೌದು.. ಆನೆ ಮತ್ತು ಮನಷ್ಯರ ನಡುವಿನ ಸಂಘರ್ಷಕ್ಕೆ ಇತಿಶ್ರೀ ಹಾಡಲೆಂದು ತಜ್ಞರು ಯೋಜನೆ ರೂಪಿಸಿ ಎಲಿಫೆಂಟ್ ಕಾರಿಡಾರ್ ಗಳಲ್ಲಿ ಹಾಕಲಾಗಿದ್ದ ಕಬ್ಬಿಣದ ಬ್ಯಾರಿಕೇಡ್ ಗಳನ್ನೇ ಅನೆಗಳು ಕಿತ್ತೆಸೆದು ತಮ್ಮ ಕೆಲಸ ಸಾಧಿಸಿಕೊಂಡಿವೆ. ಕಳೆದೊಂದು ವಾರದಲ್ಲಿ ಬರೊಬ್ಬರಿ ಮೂರು ಕಡೆ ಇಂತಹ ಘಟನೆಗಳು ವರದಿಯಾಗಿದ್ದು, ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಮೂರು ಭಾಗಗಳಲ್ಲಿ ಅಧಿಕಾರಿಗಳು ನಿರ್ಮಿಸಿದ್ದ ಎಲಿಫೆಂಟ್ ಕಾರಿಡಾರ್ ಗಳಲ್ಲಿನ ಕಬ್ಬಿಣದ ರೈಲ್ವೇ ಬ್ಯಾರಿಕೇಡ್ ಗಳನ್ನು ಕಿತ್ತೆಸೆದು ಸಮೀಪದ ಹಳ್ಳಿಗಳ ಒಳಗೆ ನುಗ್ಗಿವೆ. ಇದು ಅಧಿಕಾರಿಗಳಿಗೆ ಹೊಸ ತಲೆನೋವಾಗಿದ್ದು, ಆನೆಗಳನ್ನು ನಿಯಂತ್ರಿಸುವ ಸಂಬಂಧ ಅಧಿಕಾರಿಗಳು ಇದೀಗ ಅನ್ಯ ಮಾರ್ಗದ ಅನ್ವೇಷಣೆಗೆ ತೊಡಗುವಂತೆ ಮಾಡಿದೆ.
ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಮೀಪದ ವೀರನಹೊಸಹಳ್ಳಿಯಲ್ಲಿ ಶುಕ್ರವಾರ ಇತ್ತೀಚಿನ ಘಟನೆ ವರದಿಯಾಗಿದ್ದು, ಅಲ್ಲಿ ಕಾಡಾನೆಗಳು ಒಳಗೆ ನುಗ್ಗದಂತೆ ತಡೆಯಲು ಹಾಕಿದ್ದ ರೈಲ್ವೇ ಬ್ಯಾರಿಕೇಡ್ ಗಳನ್ನು ಕಿತ್ತೆಸೆದ ಆನೆಗಳು ಹಳ್ಳಿಯೊಳಗೆ ನುಗ್ಗಿವೆ. ಇದಕ್ಕೂ ಮೊದಲು ಇದೇ ರೀತಿಯ 2 ಘಟನೆಗಳು ಕೊಲ್ಲಾವಿಗೆ ಮತ್ತು ಮುದುಗುನೂರ್ ಗ್ರಾಮಗಳಲ್ಲಿ ವರದಿಯಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಎನ್ಟಿಆರ್ (ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ) ನಿರ್ದೇಶಕ ಡಿ ಮಹೇಶ್ ಕುಮಾರ್ ಅವರು, 'ಸಾಮಾನ್ಯವಾಗಿ ಆನೆಗಳು ಹಳಿಗಳನ್ನು ತುಳಿದು ಹಾಳುಮಾಡುವುದು ಮತ್ತು ಹಳಿಗಳ ಮೇಲೆ ಹತ್ತುವುದನ್ನು ನಾವು ನೋಡುತ್ತಿದ್ದೆವು. ಆದರೆ ಈಗ ಆನೆಗಳು ಬ್ಯಾರಿಕೇಡ್ಗಳನ್ನು ಮುರಿದು ಹಳ್ಳಿಗಳನ್ನು ಪ್ರವೇಶಿಸಿ ಬೆಳೆಗಳು ಮತ್ತು ಆಸ್ತಿಪಾಸ್ತಿಗಳನ್ನು ನಾಶಪಡಿಸುತ್ತಿವೆ. ಆನೆಗಳು ರೈಲ್ವೇ ಬ್ಯಾರಿಕೇಡ್ ಗಳಲ್ಲಿನ ದುರ್ಬಲ ಜಾಗಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗುತ್ತಿದ್ದು, ಆ ಜಾಗವನ್ನೇ ಗುರಿಯಾಸಿಕೊಂಡು ದಾಳಿ ಮಾಡಿ ಹಳಿಗಳನ್ನು ಮುರಿದು ಹಾಕುತ್ತಿವೆ ಎಂದು ಹೇಳಿದ್ದಾರೆ.
ಇನ್ನು ಆನೆಗಳ ನಿಯಂತ್ರಣಕ್ಕೆ ಅಧಿಕಾರಿಗಳು ಮತ್ತೊಂದು ಪ್ರಯೋಗಕ್ಕೆ ಮುದಾಗಿದ್ದು, ಪ್ರಸ್ತುತ ಅಳವಡಿಸಲಾಗಿರುವ ರೈಲ್ವೇ ಬ್ಯಾರಿಕೇಡ್ ಗಳಿಗೆ ವಿದ್ಯುತ್ ಸಂಪರ್ಕ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಅಂತರ್ ಸಂತೆ ಮತ್ತು ಡಿಬಿ ಕುಪ್ಪೆಯಲ್ಲಿ ಸುಮಾರು 7 ಕಿ.ಮೀ ವಿಸ್ತಾರದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ಬ್ಯಾರಿಕೇಡ್ ಗಳಿಗೆ ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಪ್ರಸ್ತುತ ನಾಗರಹೊಳೆ ಅರಣ್ಯದಲ್ಲಿ ವರದಿಯಾಗಿರುವ ಘಟನೆಗಳು ಭದ್ರಾ ಮತ್ತು ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿದಂತೆ ರಾಜ್ಯದ ಇತರೆ ಅರಣ್ಯಗಳಲ್ಲಿರುವ ಎಲಿಫೆಂಟ್ ಕಾರಿಡಾರ್ ಗಳಲ್ಲಿನ ಹಳಿಗಳನ್ನು ನಿರ್ಮಿಸುವ ಯೋಜನೆಯನ್ನು ಅಧಿಕಾರಿಗಳು ಪುನರ್ ಪರಿಶೀಲಿಸುವಂತೆ ಮಾಡಿದೆ. ಅಲ್ಲದೆ ಈಗಾಗಲೇ ನಿರ್ಮಿಸಲಾಗಿರುವ ಹಳಿಗಳನ್ನೂ ಕೂಡ ಅಧಿಕಾರಿಗಳು ಪುನರ್ ಪರಿಶೀಲಿಸುವ ಕುರಿತು ನಿರ್ಧರಿಸಿದ್ದಾರೆ.
ಸುಮಾರು 8-9 ವರ್ಷದಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಈ ವರೆಗೂ ಅವುಗಳ ಸ್ಥಿತಿಗತಿ ಕುರಿತು ವೀಕ್ಷಣೆ ಮಾಡಿಲ್ಲ. ಕೆಲ ಭಾಗಗಳಲ್ಲಿ ಹಳಿಗಳ ನಾಶವಾಗಿದ್ದು, ಮತ್ತೆ ಕೆಲ ಭಾಗಗಳಲ್ಲಿ ಆನೆಗಳು ನಾಶ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆನೆಗಳು ಹಳಿಗಳನ್ನು ತಮ್ಮ ಶಕ್ತಿ ಉಪಯೋಗಿಸಿ ಬಗ್ಗಿಸುತ್ತವೆ. ಇನ್ನೂ ಕೆಲವೆಡೆ ಆನೆಗಳ ಬಲ ಪ್ರಯೋಗದಿಂದಾಗಿ ಬ್ಯಾರಿಕೇಡ್ ಗಳ ನಡುವಿನ ಅಂತರ ದೊಡ್ಡದಾಗಿ ಇಲ್ಲಿ ಮಧ್ಯಮ ಗಾತ್ರದ ಆನೆಗಳು ಸುಲಭವಾಗಿ ನುಸುಳುವಂತೆ ಮಾಡಿದೆ. ಇದೂ ಕೂಡ ಹಳ್ಳಿಗಳಿಗೆ ಆನೆಗಳು ನುಗ್ಗಲು ದಾರಿ ಮಾಡಿಕೊಡುತ್ತದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿಯವರೆಗೆ, ಆನೆಗಳ ಚಲನವಲನವನ್ನು ನಿಯಂತ್ರಿಸಲು ಅರಣ್ಯ ಅಧಿಕಾರಿಗಳು ಬಳಿಸಿರುವ ಎಲ್ಲಾ ವಿಧಾನಗಳು ವ್ಯರ್ಥವಾಗಿವೆ. ಆನೆ ನಿಗ್ರಹ ಕಂದಕಗಳು, ಮೆಣಸಿನಕಾಯಿ ಬೇಲಿಗಳು, ಸೌರಶಕ್ತಿ ಆಧಾರಿತ ಫೆನ್ಸಿಂಗ್ ಮತ್ತು ಆಲಾರ್ಮಿಂಗ್ ವ್ಯವಸ್ಥೆಯನ್ನು ಅಧಿಕಾರಿಗಳು ಪ್ರಯತ್ನಿಸಿದ್ದಾರೆ. ಆದರೆ ಆನೆಗಳು ಈ ಎಲ್ಲವನ್ನು ಮೀರಿ ಒಳಗೆ ನುಗ್ಗುತ್ತಿವೆ. ಹೀಗಾಗಿ ಆನೆ ಕಾರಿಡಾರ್ಗಳನ್ನುಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ.