ಗಗನಕ್ಕೇರಿದ ತೈಲ ಬೆಲೆ: ರಾಜ್ಯ ಸಾರಿಗೆ ಉದ್ಯಮ ಸಂಕಷ್ಟದಲ್ಲಿ

ದೇಶದಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದ್ದು, ಪರಿಣಾಮ ಸಾರಿಗೆ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Published: 20th February 2021 01:05 PM  |   Last Updated: 20th February 2021 01:10 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ದೇಶದಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದ್ದು, ಪರಿಣಾಮ ಸಾರಿಗೆ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಗಳೂ ಕೂಡ ಏರಿಕೆಯಾಗಿದ್ದು, ಇದರಿಂದ ವ್ಯವಹಾರಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ಕಳೆದ ವರ್ಷದಿಂದ ಈ ವರೆಗೂ ಡೀಸೆಲ್ ಬೆಲೆ ರೂ.21 ರಷ್ಟು ಏರಿಕೆಯಾಗಿದೆ,

ರಾಜ್ಯ ಟ್ರಾವೆಲ್‌ ಆಪರೇಟರ್‌ ಸಂಘಟನೆಯ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಪ್ರತಿಕ್ರಿಯೆ ನೀಡಿ, ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸಾರಿಗೆ ಉದ್ಯಮದಲ್ಲಿನ ವ್ಯವಹಾರ ಶೇ.50ರಷ್ಟು ಕಡಿಮೆಯಾಗಿದೆ. ಅಂತರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗುತ್ತಿದೆ. ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ಕಂಪನಿಗಳು ನೀಡುತ್ತಿವೆ. ವ್ಯವಹಾರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೀಗ ತೈಲ ಬೆಲೆ ಏರಿಕೆ ಮತ್ತೊಂದು ಸಮಸ್ಯೆಯನ್ನು ತಂದೊಡ್ಡಿದೆ. ರಾಜ್ಯದಲ್ಲಿ ಶೇ.90 ರಷ್ಟು ಟ್ಯಾಕ್ಸಿಗಳು ಡೀಸೆಲ್ ಕಾರುಗಳಾಗಿವೆ. ಲಾಕ್ಡೌನ್ ಸಂದರ್ಭದಲ್ಲಿ ನೀಡಲಾಗಿದ್ದ ಎಲ್ಲಾ ಅನುಕೂಲಗಳನ್ನು ಹಿಂಪಡೆಯಲಾಗಿದೆ. ಸಾಲ ತೀರಿಸುವ ಒತ್ತಡದಲ್ಲಿ ಚಾಲಕರಿದ್ದಾರೆ. ಸರ್ಕಾರ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬೇಕು, ತೆರಿಗೆಗಳನ್ನು ಕಡಿತಗೊಳಿಸಬೇಕು ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿಆರ್. ಷಣ್ಮುಗಪ್ಪ ಮಾತನಾಡಿ, ಸಾರಿಗೆ ವೆಚ್ಚ ಹೆಚ್ಚಾದಂತೆ ಅಗತ್ಯ ವಸ್ತುಗಳ ಬೆಲೆಗಳೂ ಕೂಡ ಹೆಚ್ಚಳವಾಗಲಿದೆ. ತೈಲ ಬೆಲೆ ಏರಿಕೆಯಿಂದಾಗಿ ಪ್ರತೀ ಕಿಲೋಮೀಟರ್'ಗೆ ರೂ.6 ಹೆಚ್ಚಾಗಿ ನೀಡಬೇಕಾಗಿದೆ. ಇದರಿಂದ ಕಂಪನಿಗೆ ನಷ್ಟವಾಗುತ್ತಿದೆ. ಇದರ ಪರಿಣಾಮ ಶೇ.30 ರಷ್ಟು ವಾಹನಗಳು ಸಂಚಾರವನ್ನೇ ಸ್ಥಗಿತಗೊಳಿಸಿವೆ. ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್'ಗೆ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದ್ದೇವೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಈ ಕುರಿತು ಮಾರ್ಚ್ 5 ರಂದು ಸಭೆ ನಡೆಯಲಿದ್ದು, ಪ್ರತಿಭಟನೆ ಕುರಿತು ಚರ್ಚೆ ನಡೆಸುತ್ತೇವೆಂದು ತಿಳಿಸಿದ್ದಾರೆ.
 
ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಎ ಬಾಲಾಜಿ ರಾವ್ ಮಾತನಾಡಿ, ತೆರಿಗೆ ಇಳಿಕೆ ಮಾಡುವುದೊಂದೇ ಇದಕ್ಕೆ ಪರಿಹಾರವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಅಗತ್ಯ ವಸ್ತುಗಳಲ್ಲಿ ಒಂದಾಗಿದ್ದು, ಬೆಲೆ ಏರಿಕೆ ತಡೆಯಲು ಸರ್ಕಾರ ಏನಾದರೂ ಮಾಡಬೇಕಿದೆ. ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಆದರೆ, ಅದಾವುದೂ ಆಗಲಿಲ್ಲ. ಇದೀಗ ರಾಜ್ಯ ಸರ್ಕಾರದ ಬಜೆಟ್ ಮೇಲೆ ನಿರೀಕ್ಷೆಗಳಿವೆ ಎಂದಿದ್ದಾರೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp