ಪಂಚಮ ಸಾಲಿ ಹೋರಾಟ: ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ಅದರ ಸುತ್ತಮುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
Published: 21st February 2021 02:20 PM | Last Updated: 21st February 2021 02:23 PM | A+A A-

ವಿಧಾನಸೌಧ
ಬೆಂಗಳೂರು:ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ಅದರ ಸುತ್ತಮುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಕೂಡಲ ಸಂಗಮ ಲಿಂಗಾಯಿತ ಪಂಚಮ ಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಪಂಚಮ ಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಘೋಷಣೆಗೆ ಒತ್ತಾಯಿಸಿ ವಿಧಾನಸೌಧ ಮುತ್ತಿಗೆ ಹಾಕಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಧಾನಸೌಧ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಜಭವನ, ಉಚ್ಛ ನ್ಯಾಯಾಲಯ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳಿದ್ದು, ರ್ಯಾಲಿಯ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು, ಸಾರ್ವಜನಿಕ ಹಾಗೂ ಸರ್ಕಾರದ ಆಸ್ತಿ- ಪಾಸ್ತಿಗಳಿಗೆ ನಷ್ಟ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಬಹುದಾದ ಕೃತ್ಯಗಳಲ್ಲಿ ತೊಡಗುವಂತಹ ಸಂಭವನೀಯತೆ ಇರುವುದಾಗಿ ಗುಪ್ತವಾಗಿ ಕಲೆಹಾಕಲಾದ ಮಾಹಿತಿಯಿಂದ ತಿಳಿದುಬಂದಿರುವುದಾಗಿ ನಗರ ಪೊಲೀಸ್ ಆಯುಕ್ತ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ದಿಸೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಐಪಿಸಿ ಸೆಕ್ಷನ್ 144 (1) ನೇ ಪ್ರಕರಣದ ಅನ್ವಯ ವಿಧಾನಸೌಧ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಸೇರುವುದನ್ನು, ಯಾವುದೇ ಮೆರವಣಿಗೆ ಮತ್ತು ಸಭೆ ನಡೆಸುವುದನ್ನು, ಮಾರಕಾಸ್ತ್ರಗಳನ್ನು ಒಯ್ಯುವುದನ್ನು, ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು, ಪ್ರಚೋದಿತ ಘೋಷಣೆಯನ್ನು ನಿಷೇಧಿಸಲಾಗಿದೆ.