ತಮಿಳುನಾಡು ವಿರುದ್ಧ ಕೇಂದ್ರಕ್ಕೆ ದೂರು, ಮೇಕೆದಾಟು ಯೋಜನೆ ನಿಲ್ಲದು: ಡಿಸಿಎಂ ಅಶ್ವತ್ಥನಾರಾಯಣ

ರಾಜ್ಯದ ನೀರಾವರಿ ಹಿತಾಸಕ್ತಿ, ಯೋಜನೆ ಜಾರಿ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ. 

Published: 22nd February 2021 03:10 PM  |   Last Updated: 22nd February 2021 03:10 PM   |  A+A-


Ashwath Narayan

ಸಿ.ಎನ್. ಅಶ್ವತ್ಥನಾರಾಯಣ

Posted By : Lingaraj Badiger
Source : UNI

ಮಂಡ್ಯ: ರಾಜ್ಯದ ನೀರಾವರಿ ಹಿತಾಸಕ್ತಿ, ಯೋಜನೆ ಜಾರಿ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ. 

ಇಂದು ಬೆಳಗ್ಗೆ ಮಂಡ್ಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ತಮಿಳುನಾಡು ಸರಕಾರ ರೂಪಿಸಿರುವ ಯೋಜನೆಯ ವಿರುದ್ಧ ಕೇಂದ್ರಕ್ಕೆ ದೂರು ಸಲ್ಲಿಸಲಾಗುವುದು. 
ಕಾವೇರಿ ನದಿಯನ್ನು ವೈಗೈ, ವಾಲ್ಲಾರು ಮತ್ತು ಗುಂಡಾರು ನದಿಗಳಿಗೆ ಜೋಡಿಸುವ ತಮಿಳುನಾಡು ಪ್ರಸ್ತಾವನೆಗೆ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸುವುದಾಗಿಯೂ ಅವರು ಹೇಳಿದ್ದಾರೆ. ತಮಿಳುನಾಡು ಯೋಜನೆಯನ್ನು ತಡೆಯಲು ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಸರಕಾರ ಮಾಡಲಿದೆ ಎಂದರು. 

ಈಗಾಗಲೇ ಜಾರಕಿಹೊಳಿ ಅವರು ದೆಹಲಿಗೆ ತೆರಳಿದ್ದು, ಇವತ್ತು ಕೇಂದ್ರದ ಜಲಸಂಪನ್ಮೂಲ ಸಚಿವರ ಜತೆ ಮಾತುಕತೆ ನಡೆಸಲಿದ್ದಾರೆ. ನಮ್ಮ ರಾಜ್ಯದ ನೀರಾವರಿ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದರು.

ಮೇಕೆದಾಟು ಯೋಜನೆ ನಿಲ್ಲದು
ತಮಿಳುನಾಡು ಅಪಸ್ವರ ಎತ್ತಿದ್ದರೂ ಮೇಕೆದಾಟು ಯೋಜನೆ ನಿಲ್ಲುವುದಿಲ್ಲ. ಅದು ಕಾರ್ಯಗತವಾಗುವುದು ಶತಃಸಿದ್ಧ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರಿಗಾಗಿ ಕಾರ್ಯಗತ ಮಾಡುತ್ತಿರುವ ಈ ಯೋಜನೆಯನ್ನು ನಮ್ಮ ಸರಕಾರದ ಅವಧಿಯಲ್ಲೇ ಮಾಡಲಾಗುವುದು. ಇದಕ್ಕೆ ನಾಡಿನ ಜನರ ಬೆಂಬಲವಿದೆ ಎಂದು ಹೇಳಿದರು.

ಹಾಸನದಲ್ಲಿ ವಿಮಾನ ನಿಲ್ದಾಣ ಶೀಘ್ರ
ನನೆಗುದಿಗೆ ಬಿದ್ದಿರುವ ಹಾಸನ ಜಿಲ್ಲೆಯ ವಿಮಾನ ನಿಲ್ದಾಣ ಯೋಜನೆಯನ್ನು ಆದಷ್ಟು ಬೇಗ ಮುಗಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಗ್ಗೆ ಸರಕಾರದ ಗಮನ ಸೆಳೆದಿದ್ದಾರೆ. ಇದರ ಜತೆಗೆ, ರಾಜ್ಯದಲ್ಲಿ ಇನ್ನೂ ಯಾವ ಯಾವ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಅಗತ್ಯವಿದೆಯೋ ಆ ಎಲ್ಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬೀದರ್, ಕಾರವಾರ, ಶಿವಮೊಗ್ಗ, ಕಲಬುರಗಿಯಲ್ಲೂ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಮೀಸಲು ಪ್ರಚೋದನೆ ಬೇಡ
ಮೀಸಲಾತಿ ಹೋರಾಟ ಅತ್ಯಂತ ಸೂಕ್ಷ್ಮ ವಿಚಾರ. ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರಾಗಲಿ ಅಥವಾ ಇನ್ನಾರೇ ಪ್ರತಿಪಕ್ಷ ನಾಯಕರಾಗಲಿ ತಮ್ಮ ಹೇಳಿಕೆಗಳನ್ನು ನೀಡಬೇಡಿ ಎಂದು ಹೇಳಲಾಗುವುದಿಲ್ಲ. ಆದರೆ, ಯಾವ ರೀತಿಯ ಹೇಳಿಕೆ ಕೊಡಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಸರಕಾರ ಎಲ್ಲರ ಬೇಡಿಕೆಗಳನ್ನು ಗಮನಿಸುತ್ತಿದೆ. ಅಂತಿಮವಾಗಿ ಎಲ್ಲವನ್ನೂ ಪರಿಶೀಲನೆ ಮಾಡಿ ಸರಕಾರ ನ್ಯಾಯ ಸಮ್ಮತ ತೀರ್ಮಾನ ಕೈಗೊಳ್ಳಲಿದೆ ಎಂದೂ ಉಪ ಮುಖ್ಯಮಂತ್ರಿ ತಿಳಿಸಿದರು.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp