ವೀಣಾ, ಹಂಪನಾ, ದೊಡ್ಡರಂಗೇಗೌಡ, ಗೊರುಚ, ಮಲ್ಲೇಪುರಂ ಅವರಿಗೆ ಕಸಾಪ ಗೌರವ ಸದಸ್ಯತ್ವ ಪ್ರದಾನ

ಕನ್ನಡದ ಸಾಹಿತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಾ. ದೊಡ್ಡರಂಗೇಗೌಡ, ಡಾ. ಹಂಪ ನಾಗರಾಜಯ್ಯ , ಡಾ. ಗೊ.ರು. ಚನ್ನಬಸಪ್ಪ ಹಾಗೂ ಡಾ. ವೀಣಾ ಶಾಂತೇಶ್ವರ ಅವರಿಗೆ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತಿ. ಈ ಮೂಲಕ ಕಸಾಪ ತನ್ನ ಘನತೆ-ಗೌರವ ಹೆಚ್ಚಿಸಿಕೊಂಡಿತು. ಗೌರವ ಸದಸ್ಯತ್ವವು 1 ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ.

Published: 22nd February 2021 08:51 PM  |   Last Updated: 22nd February 2021 08:51 PM   |  A+A-


ವೀಣಾ, ಹಂಪನಾ, ದೊಡ್ಡರಂಗೇಗೌಡ, ಗೊರುಚ, ಮಲ್ಲೇಪುರಂ ಅವರಿಗೆ ಕಸಾಪ ಗೌರವ ಸದಸ್ಯತ್ವ ಪ್ರದಾನ

Posted By : Raghavendra Adiga
Source : UNI

ಬೆಂಗಳೂರು:  ಕನ್ನಡದ ಸಾಹಿತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಾ. ದೊಡ್ಡರಂಗೇಗೌಡ, ಡಾ. ಹಂಪ ನಾಗರಾಜಯ್ಯ , ಡಾ. ಗೊ.ರು. ಚನ್ನಬಸಪ್ಪ ಹಾಗೂ ಡಾ. ವೀಣಾ ಶಾಂತೇಶ್ವರ ಅವರಿಗೆ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತಿ. ಈ ಮೂಲಕ ಕಸಾಪ ತನ್ನ ಘನತೆ-ಗೌರವ ಹೆಚ್ಚಿಸಿಕೊಂಡಿತು. ಗೌರವ ಸದಸ್ಯತ್ವವು 1 ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ.

ಸಮಾರಂಭಕ್ಕೆ ಬರುವ ವೇಳೆ ರೈಲು ಹತ್ತುವಾಗ ಕಾಲು ಉಳುಕಿದ ಪರಿಣಾಮ ಡಾ. ವೀಣಾ ಶಾಂತೇಶ್ವರ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಗೌರವ ಸದಸ್ಯತ್ವದೊಂದಿಗೆ ನೀಡಲಾಗುವ 1 ಲಕ್ಷ ರೂ.ಗಳನ್ನು ಪರಿಷತ್ತಿನಲ್ಲೇ ಇಟ್ಟುಕೊಂಡು ಪ್ರತಿ ವರ್ಷ ಮಹಿಳಾ ಸಾಹಿತಿಗೆ ಬಹುಮಾನ ರೂಪದಲ್ಲಿ ನೀಡುವಂತೆ ಅವರು ಸಲಹೆ ನೀಡಿದ್ದಾಗಿ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ ಸಭೆಯ ಗಮನ ಸೆಳೆದರು.

ಗ್ರಂಥಾಲಯ ಆರಂಭದ ಭರವಸೆ: 3.5 ಲಕ್ಷ ಸದಸ್ಯತ್ವ ಒಳಗೊಂಡ ಕನ್ನಡ ಸಾಹಿತ್ಯ ಪರಿಷತ್ತು ವಿಶ್ವದ ಗಮನ ಸೆಳೆಯುವ ಅಂಶ. ತಾವು ಹಳ್ಳಿಯಲ್ಲಿ ಬೆಳೆದಿದ್ದರಿಂದ ಗೌರವ ಸದಸ್ಯತ್ವದ 1 ಲಕ್ಷ ರೂ. ಮೊತ್ತದಲ್ಲಿ ಗ್ರಂಥಾಲಯ ಆರಂಭಿಸಲು ವಿನಿಯೋಗಿಸುವುದಾಗಿ ಗೊ.ರು. ಚನ್ನಬಸಪ್ಪ ಹೇಳಿದರು.

ಹಳೆಗನ್ನಡ ಸಾಹಿತ್ಯ ಕಲಿಕೆಗೆ ವ್ಯವಸ್ಥೆ: ಕುವೆಂಪು ನೀಡಿದ ಸಲಹೆ ಮೇರೆಗೆ ಶುದ್ಧ ಸಾಹಿತ್ಯಕ ಸೇವೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗೌರವ ಸದಸ್ಯತ್ವ ನೀಡಬೇಕು. ಕುವೆಂಪು ಸಲಹೆಯನ್ನು ಗೌರವಿಸಬೇಕು ಎಂದು ತಾವು ಹಾಮಾನಾ, ರಂ.ಶ್ರೀ. ಮುಗುಳಿ ಅವರೊಂದಿಗೆ ಚರ್ಚಿಸಿದ ಪರಿಣಾಮ ವಿದ್ವತ್ತಿನ ಸಮೃದ್ಧತೆಯನ್ನು ಗೌರವಿಸುವ ಸಂಪ್ರದಾಯ ಮುಂದುವರಿಯಿತು. ಈಗ ತಮಗೇ ಗೌರವ ಸದಸ್ಯತ್ವ ದೊರೆಯುತ್ತಿದೆ ಎಂದು ಡಾ. ಹಂಪ ನಾಗರಾಜಯ್ಯ ಸಂತಸ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಹಳೆಗನ್ನಡದ ಸಾಹಿತ್ಯ ಕಲಿಯುವುದು ಬಲು ಕಷ್ಟ ಎಂಬ ಭಾವನೆ ಬೆಳೆಯುತ್ತಿದೆ. ಅದು ತಪ್ಪು. ಈ ಕುರಿತು ವಿದ್ಯಾರ್ಥಿಗಳಲ್ಲಿ ಹಳೆಗನ್ನಡ ಓದುವ ಆಸಕ್ತಿ ಮೂಡಿಸಲು ಕಮ್ಮಟ-ಶಿಬಿರಗಳನ್ನು ಏರ್ಪಡಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಕಲಿಯದವರಿಗೆ ಏನು ಮಾಡಬೇಕು?: ಗೌರವ ಸದಸ್ಯತ್ವ ಪಡೆದ ಡಾ. ದೊಡ್ಡರಂಗೇಗೌಡ ಮಾತನಾಡಿ ‘ಕರ್ನಾಟಕದಲ್ಲಿ ಉದ್ಯೋಗ ಸಿಗಬೇಕಾದರೆ ಕನ್ನಡಿಗರಿಗೂ ಕನ್ನಡ ಗೊತ್ತಿರದ ಇತರೆ ರಾಜ್ಯದ ಅಭ್ಯರ್ಥಿಗಳಿಗೂ ಕನ್ನಡ ಕಲಿಕೆ ಕಡ್ಡಾಯವಾಗಿಸಬೇಕು. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಗಂಭೀರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಪತ್ನಿ ಕೆ. ರಾಜೇಶ್ವರಿ ಗೌಡ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಆರಂಭಿಸಿ ವಿಮರ್ಶೆ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ನೀಡುವಂತೆಯೂ ಅವರು ಪರಿಷತ್ತಿಗೆ ಮನವಿ ಮಾಡಿದರು.

ಪರಿಷತ್ತಿನ ಕೇಂದ್ರ ಪ್ರಜ್ಞೆ ವಿಸ್ತಾರ: ಗೌರವ ಸದಸ್ಯತ್ವ ಪಡೆದ ಪ್ರೊ. ಮಲ್ಲೇಶ್ವರಂ ಜಿ. ವೆಂಕಟೇಶ ಮಾತನಾಡಿ ‘ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಉದ್ದೇಶದೊಂದಿಗೆ ಕೇಂದ್ರ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿದೆ ಎಂದು ಕಸಾಪ ಕಾರ್ಯ ಚಟುವಟಿಕೆಯನ್ನು ಬಣ್ಣಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕೆಲ ವಿ.ವಿ.ಗಳು: ಕನ್ನಡದ ಐವರು ವಿದ್ವಾಂಸರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಮಾಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ‘ಕನ್ನಡ ಜಾನಪದ ವಿವಿ, ಕನ್ನಡ ವಿವಿ ಹಾಗೂ ಲಲಿತಕಲಾ ವಿವಿಗಳನ್ನು ಕನ್ನಡ ಸಂಸ್ಕೃತಿ ಇಲಾಖೆಯಡಿ ತರಬೇಕು. ಈ ಬಗ್ಗೆ ಚಿಂತನೆ-ಚರ್ಚೆಗಳು ನಡೆಯಬೇಕು. ಕನ್ನಡ ಸಾಹಿತ್ಯದ ಯಾವುದೇ ಚಟುವಟಿಕೆಗಳು ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಾರ ಹಾಗೂ ಪ್ರಚಾರಗೊಳ್ಳಬೇಕು ಎಂದೂ ಅವರು ಸಲಹೆ ನೀಡಿದರು.

ಹಾವೇರಿಯಲ್ಲಿ ಜರುಗಲಿರುವ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸರ್ಕಾರ ಸಹಕಾರ ನೀಡಲಿದೆ ಎಂದೂ ಅವರು ಭರವಸೆ ನೀಡಿದರು.

ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭವನ್ನು ಬುಕ್ ಬ್ರಹ್ಮ ಡಿಜಿಟಲ್ ಸಂಸ್ಥೆಯು ಫೇಸ್ ಬುಕ್ ಲೈವ್ ನಲ್ಲಿ ಪ್ರಸಾರಗೊಳಿಸಿತು. ಕಮಲಾ ಹಂಪನಾ, ಡಾ. ಪದ್ಮರಾಜ ದಂಡಾವತಿ, ಜಿ. ಮಲ್ಲಿಕಾರ್ಜುನಪ್ಪ ಸೇರಿದಂತೆ ಹಿರಿ-ಕಿರಿಯ ಸಾಹಿತಿಗಳು ಉಪಸ್ಥಿತರಿದ್ದರು, ಕೆ. ರಾಜಕುಮಾರ ಸ್ವಾಗತಿಸಿದರು. ಡಾ. ಪದ್ಮರಾಜ ದಂಡಾವತಿ ವಂದಿಸಿದರು.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp