15 ವರ್ಷಗಳ ಬೇಡಿಕೆಗೆ ಅಸ್ತು: ಗ್ರಂಥಾಲಯ ಪುಸ್ತಕ ಖರೀದಿ ಮಿತಿ ಹೆಚ್ಚಿಸಿದ ಸಚಿವ ಸುರೇಶ್ ಕುಮಾರ್
ಸುಮಾರು 15 ವರ್ಷಗಳ ಬೇಡಿಕೆಯಾಗಿದ್ದ ಗ್ರಂಥಾಲಯ ಪುಸ್ತಕ ಖರೀದಿ ಮಿತಿಯನ್ನು ಹೆಚ್ಚಿಸಿ ಪ್ರಕಾಶಕರು ಮತ್ತು ಲೇಖಕರಿಗೆ ಪ್ರೋತ್ಸಾಹ ನೀಡುವ ಕ್ರಮಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಕೈಗೊಂಡಿದ್ದಾರೆ.
Published: 23rd February 2021 02:08 PM | Last Updated: 23rd February 2021 02:38 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಸುಮಾರು 15 ವರ್ಷಗಳ ಬೇಡಿಕೆಯಾಗಿದ್ದ ಗ್ರಂಥಾಲಯ ಪುಸ್ತಕ ಖರೀದಿ ಮಿತಿಯನ್ನು ಹೆಚ್ಚಿಸಿ ಪ್ರಕಾಶಕರು ಮತ್ತು ಲೇಖಕರಿಗೆ ಪ್ರೋತ್ಸಾಹ ನೀಡುವ ಕ್ರಮಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಕೈಗೊಂಡಿದ್ದಾರೆ.
ಗ್ರಂಥಾಲಯಗಳ ಪುಸ್ತಕ ಖರೀದಿ ಮಿತಿ ಹೆಚ್ಚಿಸುವಂತೆ ಈ ಹಿಂದೆ 15 ವರ್ಷದ ಬಾಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸುರೇಶ್ ಕುಮಾರ್ ಅವರು, ಗ್ರಂಥಾಲಯ ಪುಸ್ತಕ ಖರೀದಿ ನೀತಿಯನ್ನು ರೂ. 1 ಲಕ್ಷದಿಂದ ರೂ.2.5 ಲಕ್ಷಗಳಿಗೆ ಹೆಚ್ಚಿಸಿದ್ದಾರೆ.
ಸಾರ್ವಜನಿಕ ಗ್ರಂಥಾಲಯಗಳ ಇಲಾಖೆ ನಿರ್ದೇಶಕರಾಗಿರುವ ಸತೀಶ್ ಕುಮಾರ್ ಎಸ್ ಹೊಸಮನಿಯವರು ಮಾತನಾಡಿ, ಸೀಮಿತ ಪುಸ್ತಕಗಳ ಪ್ರತಿಗಳಿಗಾಗಿ ಪ್ರಕಾಶಕರಿಗೆ ಈ ಹಿಂದೆ ರೂ.1 ಲಕ್ಷ ನೀಡಲಾಗುತ್ತಿತ್ತು. ಈ ಹಣದಲ್ಲಿ 300 ಪ್ರತಿ ಪುಸ್ತಕಗಳನ್ನು ಮುದ್ರಿಸಲಾಗುತ್ತಿತ್ತು. ಸರ್ಕಾರದ ಈ ನಿರ್ಧಾರ ಪ್ರಕಾಶಕರಿಗೆ ಹಾಗೂ ಸಾಹಿತಿಗಳ ಪುಸ್ತಕಗಳಿಗೆ ಉತ್ತಮ ಬೆಲೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಸಂಘದ ಕಾರ್ಯದರ್ಶಿ ಆರ್.ದೊಡ್ಡೇಗೌಡ, ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಗೌರವ ಸಲಹೆಗಾರರಾದ ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ ಮಾತನಾಡಿ, ಈ ಬೇಡಿಕೆ ಬಹು ವರ್ಷದ ಬೇಡಿಕೆಯಾಗಿದೆ. ಈ ನಿರ್ಧಾರದಿಂದ ಪ್ರಕಾಶಕರು ಮತ್ತು ಬರಹಗಾರರಿಗೆ ಹೆಚ್ಚಿನ ಪ್ರೇರಣೆ ದೊರೆಯಲಿದೆ ಎಂದು ಹೇಳಿದ್ದಾರೆ.
ಮಿತಿ ಹೆಚ್ಚಿಸುವಂತೆ ಎಲ್ಲಾ ಸರ್ಕಾರಗಳಿಗೂ ಹಲವು ಬಾರಿ ಮನವಿ ಮಾಡಿದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಆದರೆ, ಸುರೇಶ್ ಕುಮಾರ್ ಅವರು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು, ಇದು ಪುಸ್ತಕ ಲೋಕದಲ್ಲಿ ಹೊಸ ದಿಸೆ ತೆರೆದುಕೊಳ್ಳಲಿದೆ. ಕನ್ನಡ ಬರಹಗಾರರಿಗೆ ಮತ್ತು ಪ್ರಕಾಶಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.