ಶಿವಮೊಗ್ಗ ಸ್ಫೋಟ ಘಟನೆಗೆ ಮುಂಚಿನಿಂದಲೂ ಚಿಕ್ಕಬಳ್ಳಾಪುರದಲ್ಲಿ ಸ್ಫೋಟಕಗಳ ಸಂಗ್ರಹ ಇತ್ತು: ನಿರಾಣಿ
ಶಿವಮೊಗ್ಗ ಸ್ಫೋಟ ಘಟನೆಗೂ ಮುಂಚೆಯಿಂದಲೂ ಚಿಕ್ಕಬಳ್ಳಾಪುರ ಘಟನೆಯ ಸ್ಪೋಟಕಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಮಂಗಳವಾರ ಹೇಳಿದ್ದಾರೆ.
Published: 23rd February 2021 06:19 PM | Last Updated: 23rd February 2021 07:32 PM | A+A A-

ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ
ಚಿಕ್ಕಬಳ್ಳಾಪುರ: ಶಿವಮೊಗ್ಗ ಸ್ಫೋಟ ಘಟನೆಗೂ ಮುಂಚೆಯಿಂದಲೂ ಚಿಕ್ಕಬಳ್ಳಾಪುರ ಘಟನೆಯ ಸ್ಪೋಟಕಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಮಂಗಳವಾರ ಹೇಳಿದ್ದಾರೆ.
ಶಿವಮೊಗ್ಗ ಸ್ಫೋಟಕ್ಕೂ ಮುಂಚೆಯಿಂದಲೂ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಸದ್ಯ ಅಧಿಕೃತ ಕಾರ್ಯಗಳಿಗಾಗಿ ದೆಹಲಿಯಲ್ಲಿದ್ದೇನೆ. ಈ ಸಂಜೆ ಬೆಂಗಳೂರಿಗೆ ಬರಲಿದ್ದು, ನೇರವಾಗಿ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡುವುದಾಗಿ ಅವರು ತಿಳಿಸಿದ್ದಾರೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ , ಎಸ್ಪಿ ಹಾಗೂ ನಮ್ಮ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.
ತರಬೇತಿ ಪಡೆದ ಕೌಶಲ್ಯಯುಕ್ತ ಕೆಲಸಗಾರರು ಹಾಗೂ ಗಣಿ ಶಾಲೆ ಸ್ಥಾಪನೆಯ ಪ್ರಾಮುಖ್ಯತೆ ಬಗ್ಗೆ ಈ ದುರಂತ ನಮಗೆ ನೆನಪು ಮಾಡಿದೆ. ಗಣಿಗಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಜನರು, ಸ್ಫೋಟಕಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಬಗ್ಗೆ ತರಬೇತಿ ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಗಣಿ ಶಾಲೆ ತೆರೆಯಲು ಸರ್ಕಾರ ಯೋಜನೆ ಹಾಕಿಕೊಂಡಿದೆ ಮತ್ತು ಗಣಿಗಾರಿಕೆ ಪ್ರದೇಶದಲ್ಲಿ ಜನರಿಗೆ ಸುರಕ್ಷತೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಅಕ್ರಮ, ಕಾನೂನು ಬಾಹಿರ ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಿರಾಣಿ ಎಚ್ಚರಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಳಿ ಸಂಭವಿಸಿದ ಗಣಿ ಸ್ಫೋಟದಲ್ಲಿ 6 ಮಂದಿ ಮೃತಪಟ್ಟಿದ್ದು, ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ.