ದಾಳಿ ಮಾಡಿದ ಹುಲಿಯನ್ನು ಬಿಟ್ಟು ಬೇರೆ ವ್ಯಾಘ್ರವನ್ನು ಸೆರೆಹಿಡಿಯಲಾಗಿದೆ: ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಕಿಡಿ
ಕೊಡಗಿನಲ್ಲಿ ಅರಣ್ಯಾಧಿಕಾರಿಗಳು ಸೆರೆ ಹಿಡಿದ ಹುಲಿ ದಾಳಿ ಮಾಡಿದ್ದ ಹುಲಿಯಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Published: 23rd February 2021 11:25 AM | Last Updated: 23rd February 2021 11:25 AM | A+A A-

ಕಾರ್ಯಾಚರಣಯಲ್ಲಿ ತೊಡಗಿರುವ ಅರಣ್ಯ ಅಧಿಕಾರಿಗಳು
ಮಡಿಕೇರಿ: ಕೊಡಗಿನಲ್ಲಿ ಅರಣ್ಯಾಧಿಕಾರಿಗಳು ಸೆರೆ ಹಿಡಿದ ಹುಲಿ ದಾಳಿ ಮಾಡಿದ್ದ ಹುಲಿಯಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದಕ್ಷಿಣ ಕೊಡಗಿನಲ್ಲಿ ಹಲವು ಹುಲಿಗಳು ಓಡಾಟ ನಡೆಸಿರುವ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಆದರೆ, ಗ್ರಾಮಕ್ಕೆ ಎಷ್ಟು ಹುಲಿಗಳು ಬಂದಿವೆ ಎಂಬ ಮಾಹಿತಿ ಅರಣ್ಯಾಧಿಕಾರಿಗಳಿಗೇ ತಿಳಿದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಶ್ರೀಮಂಗಲ ಸಮೀಪದ ಟಿ ಶೆಟ್ಟಿಗೇರಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ 60 ವರ್ಷದ ಚಿನ್ನಿ ಎಂಬ ಮಹಿಳೆ, ಶನಿವಾರ ಸಂಜೆ ಅಯ್ಯಪ್ಪ ಎಂಬ 16 ವರ್ಷದ ಬಾಲಕನನ್ನು ಹುಲಿ ಸಾಯಿಸಿತ್ತು.
ದಾಳಿ ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಬಳಿಕ ಎಚ್ಚೆತ್ತ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಶಿಷ್ಟಾಚಾರದಂತೆ ಹುಲಿಯನ್ನು ಜೀವಂತವಾಗಿ ಸೆರೆಹಿಡಿಯುವತ್ತ ಗಮನಹರಿಸಿದ್ದ ಅಧಿಕಾರಿಗಳು, ಅಂತಿಮವಾಗಿ ಮಂಚಲ್ಲಿ ಗ್ರಾಮದ ಬಳಿ ಹುಲಿಹೆಜ್ಜೆ ಜಾಡು ಹಿಡಿದು ಪತ್ತೆ ಹಚ್ಚಿದ್ದರು. ಬಳಿಕ ನಾಲ್ಕು ಆನೆಗಳನ್ನು ಬಳಸಿಕೊಂಡು ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಆದರೆ, ಇದಕ್ಕೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದು, ದಾಳಿ ನಡೆಸಿದ ಹುಲಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿಲ್ಲ. ಬದಲಾಗಿ ಬೇರೆ ಹುಲಿಯನ್ನು ಸೆರೆ ಹಿಡಿದಿದ್ದಾರೆಂದು ಗ್ರಾಮಸ್ಥರು ಹೇಳಿದ್ದಾರೆ.
ಅರಣ್ಯ ಇಲಾಖೆ ಸೆರೆ ಹಿಡಿದಿರುವ ಹುಲಿ ಸಾಕಷ್ಟು ಬಲಹೀನವಾಗಿದೆ. ನಡೆಯಲು ಸಾಧ್ಯವಾಗುತ್ತಿಲ್ಲ. ಇಬ್ಬರನ್ನು ಬಲಿಪಡೆದುಕೊಂಡಿದ್ದ ಹುಲಿ ಶೇ.100ರಷ್ಟು ಅದಲ್ಲ ಎಂದು ವಿಜಯ್ ನಂಜಪ್ಪ ಅವರು ಹೇಳಿದ್ದಾರೆ.
ಗ್ರಾಮಸ್ಥರ ಆಗ್ರಹ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಬೋನ್ ನ್ನು ಇಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.