
ಶಿವಮೊಗ್ಗ ಸ್ಫೋಟದ ದೃಶ್ಯ
ಶಿವಮೊಗ್ಗ: ಜನವರಿ 21 ರಂದು ಶಿವಮೊಗ್ಗ ಬಳಿಯ ಹುಣಸೋಡು ಎಂಬಲ್ಲಿ ಆರು ಮಂದಿ ಸಾವನ್ನಪ್ಪಿದ ಕಲ್ಲುಕ್ವಾರಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಂಬತ್ತು ಜನರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಭೂಮಿಯ ಮಾಲೀಕರು,ಕಲ್ಲು ಪುಡಿಮಾಡುವ ಘಟಕವನ್ನು ನಿರ್ವಹಿಸುವವರು ಮತ್ತು ಸ್ಫೋಟಕಗಳ ಪೂರೈಕೆದಾರರು ಸೇರಿದ್ದಾರೆ. ಶಿವಮೊಗ್ಗ ಮತ್ತು ನೆರೆಯ ಸ್ಥಳಗಳಲ್ಲಿ ನಡುಕ ಉಂಟುಮಾಡಿದ್ದ ಸ್ಫೋಟದಿಂದಾಗಿ ನಗರದ ಕಟ್ಟಡಗಳಲ್ಲಿ ಬಿರುಕು ಉಂಟಾಗಿದೆ.
ಶಿವಮೊಗ್ಗ ಗ್ರಾಮೀಣ ಪೊಲೀಸರು ಜನವರಿ 22 ರಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್ಪಿ ಕೆಎಂ ಶಾಂತರಾಜ್ ಆರು ಅಧಿಕಾರಿಗಳ ತಂಡ ರಚಿಸಿದ್ದರು. ಸ್ಫೋಟ ಸಂಭವಿಸಿದ ಒಂದು ದಿನದೊಳಗೆ, ಪುಡಿಮಾಡುವ ಘಟಕದ ಪರವಾನಗಿಯನ್ನು ಹೊಂದಿದ್ದ ಬಿ.ವಿ.ಸುಧಾಕರ್, ನರಸಿಂಹ, ಘಟಕದ ವ್ಯವಸ್ಥಾಪಕರಾದ ಮುಮ್ತಾಜ್ ಅಹ್ಮದ್ ಮತ್ತು ಭದ್ರಾವತಿಯ ರಶೀದ್ ಅವರನ್ನು ಬಂಧಿಸಲಾಗಿದೆ.
ಪೊಲೀಸರು ಸ್ಫೋಟಕಗಳ ಮೂಲವನ್ನು ಹುಡುಕುತ್ತಾ ದಾವಂಗೆರೆ ಜಿಲ್ಲೆಯ ಜಾಗಲೂರು, ಆಂಧ್ರಪ್ರದೇಶದ ಅನಂತಪುರ, ಹೈದರಾಬಾದ್, ಮುಂಬೈ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡಿದರು. ಅಂತಿಮವಾಗಿ, ಅವರುಅನಂತಪುರ ಜಿಲ್ಲೆಯ ರಾಯದುರ್ಗದ ಶ್ರೀರಾಮುಲು ಅವರು ಪತ್ತೆಯಾಗಿದ್ದಾರೆ.ಅವರನ್ನು ಮುಂಬೈನಲ್ಲಿ ಬಂಧಿಸಲಾಯಿತು. ಅವರೊಡನೆ ಅವರ ಇಬ್ಬರು ಗಂಡು ಮಕ್ಕಳಾದ ಮಂಜುನಾಥ್ ಸಾಯಿ ಮತ್ತು ಪೃಥ್ವಿರಾಜ್ ಕೂಡ ಬಂಧಿಸಲ್ಪಟ್ಟರು. ಏತನ್ಮಧ್ಯೆ, ಪೊಲೀಸ್ ಅಧಿಕಾರಿಗಳ ಮತ್ತೊಂದು ತಂಡವು ದಾವಂಗೆರೆಯಲ್ಲಿನ ಶಂಕರಗೌಡ ಕುಲಕರ್ಣಿ ಮತ್ತು ಅವರ ಮಗ ಅವಿನಾಶ್ ಕುಲಕರ್ಣಿ ಅವರನ್ನು ಪತ್ತೆ ಮಾಡಿ ಬಂಧಿಸಿದೆ.
ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದರು. ತಾಂತ್ರಿಕ ತಜ್ಞರನ್ನು ಒಳಗೊಂಡ ಐವರು ಸದಸ್ಯರ ಸಮಿತಿಯ ನೇತೃತ್ವವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ವಹಿಸಿದ್ದರು. ಆದರೆ, ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿದ ನಂತರ, ಕಂದಾಯ ಇಲಾಖೆಯ ಆಯುಕ್ತರು ತನಿಖಾ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.