ಏರ್'ಪೋರ್ಟ್ ಹಳೇ ರನ್ ವೇ ಕಾಮಗಾರಿ ಮಾರ್ಚ್ ವೇಳೆಗೆ ಪೂರ್ಣ
ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಳೇ ರನ್ ವೇ ಪುನರ್ ನಿರ್ಮಾಣದ ಕಾಮಗಾರಿ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.
Published: 23rd February 2021 11:58 AM | Last Updated: 23rd February 2021 02:33 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಳೇ ರನ್ ವೇ ಪುನರ್ ನಿರ್ಮಾಣದ ಕಾಮಗಾರಿ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.
ನಿನ್ನೆಯಷ್ಟೇ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಕಾಮಗಾರಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ರನ್ ವೇ ಪುನರ್ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಅಂತಿಮ ಕೆಲಸಗಳು ನಡೆಯುತ್ತಿವೆ. ಸದ್ಯ ಎರಡನೇ ರನ್ ವೇ ಮುಖಾಂತರ ವಿಮಾನಗಳ ಸಂಚಾರ ನಡೆಯುತ್ತಿದೆ. ಹಳೇ ರನ್ ಕಾಮಗಾರಿ ಪೂರ್ಣಗೊಂಡ ಬಳಿಕ ಅದರಲ್ಲೂ ವಿಮಾನಗಳ ಸಂಚಾರ ಆರಂಭವಾಗಲಿದೆ. ಮುಂಬೈನ ಎಐಸಿ ಸಂಸ್ಥೆ ಸುಮಾರು ರೂ.260 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು, ನಿಗದಿಪಡಿಸಿದ ಸಮಯಕ್ಕಿಂತಲೂ ಬೇಗ ಕಾಮಗಾರಿ ಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ.
ನಾಲ್ಕು ಕಿಮೀ ಉದ್ದದ ಈ ರನ್ ವೇ ಮಧ್ಯದಲ್ಲಿ ಲೈಟ್ ಅಳವಡಿಸಲಾಗಿದೆ. ಇದರಿಂದ ವಿಮಾನಗಳ ಸಂಚಾರಕ್ಕೆ ಹೆಚ್ಚು ಅನುಕೂಲ ಆಗುತ್ತದೆ. ಅಂತೆಯೇ ಟ್ಯಾಕ್ಸಿ ವೇ, ಒಳಚರಂಡಿ ಏರ್'ಫೀಲ್ಡ್ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ವಿಮಾನ ನಿಲ್ದಾಣದ ಎರಡು ರನ್ ವೇಗಳ ಮೂಲಕ ವಾರ್ಷಿಕ 60ರಿಂದ 75 ದಶಲಕ್ಷ ಪ್ರಯಾಣಿಕರನ್ನು ನಿಭಾಯಿಸಬಹುದು. ಇದರಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಉತ್ತಮ ಲಾಭವಾಗಲಿದೆ ಎಂದು ತಿಳಿಸಿದರು.
ಕೊರೋನಾ ಸಾಂಕ್ರಾಮಿಕ ರೋಗದಿಂದ ಪ್ರಾಧಿಕಾರಕ್ಕೆ ಅಪಾರ ನಷ್ಟವಾಗಿದೆ. ಕೋವಿಡ್ ಪೂರ್ವದಲ್ಲಿ ವಾರ್ಷಿದ 33ದಶ ಲಕ್ಷ ಪ್ರಯಾಣಿಕರು ಈ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದರು. ಇದೀಗ 12 ದಶಲಕ್ಷ ಇಳಿದಿದೆ. ಮುಂದೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದಿದ್ದಾರೆ.