
ಸಂಗ್ರಹ ಚಿತ್ರ
ಬೆಂಗಳೂರು: ಕೋರೋನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಸಹ ಸಚಿವರು, ಸಂಸದರ ಐಶಾರಾಮಿ ಬದುಕಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಿಲ್ಲ.
ಕೋವಿಡ್ ಸಂಕಷ್ಟದಲ್ಲೂ ಇವರ ಐಶಾರಾಮಿ ಬದುಕಿಗೆ ಇನ್ನಷ್ಟು ಸವಲತ್ತುಗಳು ಸೇರ್ಪಡೆಯಾಗುತ್ತಿದ್ದು, ಸಚಿವರು, ಸಂಸದರ ಕಾರು ಖರೀದಿ ಮೊತ್ತವನ್ನು ಸರ್ಕಾರ ಗಣನೀಯವಾಗಿ ಹೆಚ್ಚಿಸಿದೆ.
ಕಾರು ಖರೀದಿಯ ಮೊತ್ತವನ್ನು ಹೆಚ್ಚಿಸಿ, ಆದೇಶ ಹೊರಡಿಸಲಾಗಿದೆ. ಹೊಸ ಕಾರು ಖರೀದಿ ಮಾಡಲು 23 ಲಕ್ಷ ರೂಪಾಯಿ ನೀಡಲು ಸರ್ಕಾರ ಸಮ್ಮತಿ ನೀಡಿದೆ. ಈ ಹಿಂದೆ ಕಾರು ಖರೀದಿಗೆ ನೀಡುತ್ತಿದ್ದ ಮೊತ್ತವನ್ನು ಹೆಚ್ಚಳ ಮಾಡಲು ಸಚಿವರು, ಸಂಸದರಿಂದ ಒತ್ತಡ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಆರ್ಥಿಕ ಇಲಾಖೆಗೆ ಸರ್ಕಾರ ಪತ್ರ ಬರೆದಿದ್ದು,ಆರ್ಥಿಕ ಇಲಾಖೆ ಇದಕ್ಕೆ ಸಮ್ಮತಿ ನೀಡಿದೆ.
ಹೀಗಾಗಿ ರಾಜ್ಯದ ಎಲ್ಲಾ ಸಚಿವರು, ಸಂಸದರು ಕಾರು ಖರೀದಿ ಮಾಡಲು ಇನ್ನು ಮುಂದೆ 23 ಲಕ್ಷ ರೂ ವೆಚ್ಚ ಮಾಡಬಹುದೆಂದು ಸರ್ಕಾರ ತಿಳಿಸಿದೆ.ಈ ಮೊದಲು ಹೊಸ ಕಾರು ಖರೀದಿಗೆ 22 ಲಕ್ಷ ರೂ ಗಳನ್ನು ನೀಡುತ್ತಿದ್ದ ರಾಜ್ಯ ಸರ್ಕಾರ ಇದೀಗ 1 ಲಕ್ಷ ರೂ.ಹೆಚ್ಚಿಸಿದೆ.