ಕಾಲೇಜು, ಅಪಾರ್ಟ್'ಮೆಂಟ್'ನಲ್ಲಿ ಮತ್ತೆ 5 ಮಂದಿಯಲ್ಲಿ ಕೊರೋನಾ ಪತ್ತೆ: ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆ
ಸಂಭ್ರಮ, ಅಗ್ರಗಾಮಿ ಕಾಲೇಜು, ಪೂರ್ವ ವೆನಿಜಿಯಾ ಅಪಾರ್ಟ್'ಮೆಂಟ್'ನಲ್ಲಿ ಶನಿವಾರ ಮತ್ತೆ 5 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
Published: 28th February 2021 11:20 AM | Last Updated: 28th February 2021 11:20 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಸಂಭ್ರಮ, ಅಗ್ರಗಾಮಿ ಕಾಲೇಜು, ಪೂರ್ವ ವೆನಿಜಿಯಾ ಅಪಾರ್ಟ್'ಮೆಂಟ್'ನಲ್ಲಿ ಶನಿವಾರ ಮತ್ತೆ 5 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
ಕಾವಲ್ ಭೈರಸಂದ್ರದ ಮಂಜುಶ್ರೀ ನರ್ಸಿಂಗ್ ಕಾಲೇಜು, ಬೊಮ್ಮನಹಳ್ಳಿ ಹಾಗೂ ಮಹಾದೇವಪುರದ ಅಪಾರ್ಟ್'ಮೆಂಟ್ ನ ಬಳಿಕ ಇದೀಗ ಯಲಹಂಕ ವಲಯದ ಮೂರು ಕಡೆ ಕ್ಲಸ್ಟರ್ ಮಾದರಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿದೆ. ಕಳೆದ ಶುಕ್ರವಾರದವರೆಗೆ ಒಟ್ಟು 28 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು.
ಈ ವರೆಗೆ ಸಂಭ್ರಮ ಕಾಲೇಜು, ಅಗ್ರಗಾಮಿ ಕಾಲೇಜು ಮತ್ತು ಪೂರ್ವ ವೆನಿಜಿಯಾ ಅಪಾರ್ಟ್'ಮೆಂಟ್'ನಲ್ಲಿ 2,018 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, 23 ಮಂದಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ಸೋಂಕಿತರ ಸಂಪರ್ಕದಲ್ಲಿದ್ದ 173 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಿದಾಗ 10 ಮಂದಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಖ್ಯೆ 33ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾತ್ ಮಾಹಿತಿ ನೀಡಿದ್ದಾರೆ.
ಕ್ಲಸ್ಟರ್ ಮಾದರಿಯಲ್ಲಿ ಸೋಂಕು ಪತ್ತಯಾಗುತ್ತಿರುವ ಪ್ರದೇಶದಲ್ಲಿ ಎಲ್ಲರನ್ನೂ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ ನಗರದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಕವಾಗಿ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.