ಅಗ್ಗದ ದರದಲ್ಲಿ ಸೈಟ್ ಕೊಡಿಸುವುದಾಗಿ ಹಲವರಿಗೆ ವಂಚಿಸುತ್ತಿದ್ದ ನಿರ್ಮಾಪಕ ಕೊನೆಗೂ ಪೊಲೀಸರ ಬಲೆಗೆ!
ಕರ್ನಾಟಕ ಗೃಹ ಮಂಡಳಿ ಅಧಿಕಾರಿ ಸೋಗಿನಲ್ಲಿ ಅಗ್ಗದ ದರಕ್ಕೆ ನಿವೇಶನ ಕೊಡಿಸುವುದಾಗಿ ಹೇಳಿ ಹಲವರಿಗೆ ವಂಚಿಸುತ್ತಿದ್ದ ನಿರ್ಮಾಪಕ ಹಾಗೂ ನಿರ್ದೇಶಕನೂ ಆಗಿರುವ ಆರೋಪಿಯೊಬ್ಬ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
Published: 02nd January 2021 11:52 AM | Last Updated: 02nd January 2021 11:52 AM | A+A A-

ಬಂಧಿತ ಆರೋಪಿ ಹರಿಪ್ರಸಾದ್
ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಅಧಿಕಾರಿ ಸೋಗಿನಲ್ಲಿ ಅಗ್ಗದ ದರಕ್ಕೆ ನಿವೇಶನ ಕೊಡಿಸುವುದಾಗಿ ಹೇಳಿ ಹಲವರಿಗೆ ವಂಚಿಸುತ್ತಿದ್ದ ನಿರ್ಮಾಪಕ ಹಾಗೂ ನಿರ್ದೇಶಕನೂ ಆಗಿರುವ ಆರೋಪಿಯೊಬ್ಬ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಜಾಜಿನಗರದ ನಿವಾಸಿ ಶ್ರೀಧರ್ ಅಲಿಯಾಸ್ ಹರಿಪ್ರಸಾದ್ (29) ಬಂಧಿತ ಆರೋಪಿಯಾಗಿದ್ದಾನೆ.
ಮಹಾಲಕ್ಷ್ಮೀ ಲೇಔಟ್ ನಿವಾಸಿ ಜ್ಯೋತಿಷಿ ಶಂಕರ್ ಜಿ.ಹೆಗ್ಡೆಯೆಂಬುವವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಶ್ರೀಧರ್ ಅಲಿಯಾಸ್ ಹರಿ ಪ್ರಸಾದ್, ಕಲಿಯಗದ ಕಂಸ ಚಿತ್ರ ನಿರ್ದೇಶನ ಮಾಡಿದ್ದು, ರಾಜನಿಗೂ ರಾಣಿಗೂ ಎಂಬ ಚಿತ್ರಕ್ಕೆ ಹಣ ಹೂಡಿದ್ದಾನೆ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ದೂರುದಾರ ಜ್ಯೋತಿಷಿ ಶಂಕರ್ ಜಿ ಹೆಗಡೆ ಅವರಿಗೆ ಆರೋಪಿ ಹರಿಪ್ರಸಾದ್ ಕರ್ನಾಟಕ ಗೃಹ ಮಂಡಳಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ಕಡಿಮೆ ಮೊತ್ತದಲ್ಲಿ ಕರ್ನಾಟಕ ಗೃಹ ಮಂಡಳಿಯಲ್ಲಿ ನಿವೇಶನ ಕೊಡಿಸುವುದಾಗಿ ಜ್ಯೋತಿಷಿಗೆ ನಂಬಿಸಿದ್ದ. ಅಲ್ಲದೆ, ಚಿತ್ರರಂಗದ ಹಲವು ಗಣ್ಯರಿಗೆ ನಿವೇಷನ ಕೊಡಿಸಿದ್ದೇನೆ ಎಂದು ಹೇಳಿ ಅವರೊಂದಿಗೆ ಫೋಟೋಗಳನ್ನು ತೋರಿಸಿದ್ದ. ಜ್ಯೋತಿಷಿ ಅವರ ಬಳಿ ಆರೋಪಿ ಅರ್ಜಿಯೊಂದನ್ನು ಭರ್ತಿ ಮಾಡಿಸಿಕೊಂಡಿದ್ದ ನಂತರ ಆರೋಪಿ ಮೊಬೈಲ್ ಸಂಖ್ಯೆಯಿಂದ ದೂರುದಾರ ಜ್ಯೋತಿಷಿ ಮೊಬೈಲ್'ಗೆ ಚಲನ್ ಮೂಲಕ ಮಂಡಳಿಗೆ ಜೆಡಿಕೆಹೆಚ್'ಬಿಎಪಿಎಲ್ ಎಂಬ ಆ್ಯಪ್ ಮೂಲಕ ಹಣ ಕಟ್ಟಿರುವುದಾಗಿ ಸಂದೇಶ ಕಳುಹಿಸಿದ್ದ. ಇದು ಗೃಹ ಮಂಡಳಿಯವರೇ ಕಳಿಸಿದ್ದಂತೆ ಇತ್ತು. ಇದನ್ನು ನಂಬಿದ ಜ್ಯೋತಿಷಿ ರೂ.1,73,900 ಹಣ ಪಾವತಿಸಿದ್ದರು. ಬಳಿಕ ಅದೇ ಆ್ಯಪ್ ಮೂಲಕ ಮತ್ತೊಮ್ಮೆ ಮೊದಲ ಕಂತು ರೂ.6.50 ಲಕ್ಷ ಬಾಕಿ ಇದ್ದು, ಡಿ.21 ರೊಳಗೆ ಪಾವತಿಸಬೇಕೆಂದು ಡಿ.18 ರಂದು ಸಂದೇಶ ಬಂದಿದೆ. ಈ ವೇಳೆ ಜ್ಯೋತಿಷಿ ಶಂಕ್ರ ಅವರು ಹಣ ಪಾವತಿಸಿದ್ದಾರೆ.
ಈ ಮಧ್ಯೆ ಡಿ.25 ರಂದು ಮಂಡಳಿಯ ನಿವೇಶನಗಳನ್ನು ಪಡೆಯಲು ಹೆಚ್ಚುವರಿ ಖರ್ಚು ರೂ.4 ಲಕ್ಷ ಕೊಡಿ ಎಂದು ಆರೋಪಿ ದೂರುದಾರರ ಬಳಿ ಬಂದಿದ್ದ. ಅನುಮಾನಗೊಂಡ ಜ್ಯೋತಿಷಿ ಆರೋಪಿಯನ್ನು ಹಿಡಿದು ಪ್ರಶ್ನಿಸಿದಾಗ ತನ್ನ ಬಳಿಯಿದ್ದ ರೂ.3.40 ಲಕ್ಷ ವಾಪಸ್ ನೀಡಿದ್ದ. ಉಳಿದ ಹಣ ನೀಡಲು ಸತಾಯಿಸುತ್ತಿದ್ದ. ವಂಚನೆಯಾಗಿರುವ ಬಗ್ಗೆ ಪೊಲೀಸರು ಜ್ಯೋತಿಷಿ ದೂರು ನೀಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಷ್ಟೇ ಅಲ್ಲದೆ ಆರೋಪಿ ವಿರುದ್ಧ ಬಾಣಸವಾಡಿ, ಸಿಕೆ ಅಚ್ಚುಕಟ್ಟು, ವಿಧಾನಸೌಧ ಹಾಗೂ ಮಡಿವಾಳ ಪೊಲೀಸ್ ಠಾಣೆಯಲ್ಲೂ ದೂರುಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.