ಕೆ.ಆರ್. ಮಾರುಕಟ್ಟೆಯ ಜಲಕಂಠೇಶ್ವರ ದೇವಸ್ಥಾನ ಬಳಿ ಪುರಾತನ ಕೊಳ, ವಿಗ್ರಹ, ಶಾಸನಗಳು ಪತ್ತೆ: ಶಾಸಕ ಉದಯ್ ಗರುಡಾಚಾರ್
ನಗರದ ಕೆ ಆರ್ ಮಾರುಕಟ್ಟೆ ಬಳಿಯಿರುವ ಜಲಕಂಟೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತನ ಕಲ್ಲಿನ ವಿಗ್ರಹಗಳು, ಕೊಳ ಪತ್ತೆಯಾಗಿದೆ ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಉದಯ್ ಗರುಡಾಚಾರ್ ಹೇಳಿದ್ದಾರೆ.
Published: 06th January 2021 12:26 PM | Last Updated: 06th January 2021 01:18 PM | A+A A-

ಪುರಾತನ ವಸ್ತುಗಳ ಪರಿಶೀಲನೆಯಲ್ಲಿರುವ ಶಾಸಕ ಗರುಡಾಚಾರ್
ಬೆಂಗಳೂರು: ನಗರದ ಕೆ ಆರ್ ಮಾರುಕಟ್ಟೆ ಬಳಿಯಿರುವ ಜಲಕಂಟೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತನ ಕಲ್ಲಿನ ವಿಗ್ರಹಗಳು, ಕೊಳ ಪತ್ತೆಯಾಗಿದ್ದು, ಪುರತಾತ್ವ ಇಲಾಖೆಯಿಂದ ಹೆಚ್ಚಿನ ಪರಿಶೀಲನೆ ನಡೆಸಿ ಮುಂದಿನ ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಉದಯ್ ಗರುಡಾಚಾರ್ ಹೇಳಿದ್ದಾರೆ.
ಕೋಟೆ ಶಾಲೆಯ ಬಳಿ ಇರುವ ಜಲಕಂಠೇಶ್ವರ ಆವರಣದಲ್ಲಿ ತೆಗೆಯಲಾದ ವಿಗ್ರಹಗಳು, ಶಾಸನಗಳು, ಕಲ್ಲುಗಳು ಮತ್ತಿತರ ಅಮೂಲ್ಯ ವಸ್ತುಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಲ ಕಂಠೇಶ್ವರ ದೇವಸ್ಥಾನ ಇದಾಗಿದೆ. ನೀರಿನಲ್ಲಿರುವ ಈಶ್ವರನಿಗೆ ಜಲ ಕಂಠೇಶ್ವರ ಎನ್ನುತ್ತಾರೆ. ಜತೆಗೆ ಇಲ್ಲಿ ಆಂಜನೇಯನ ಗುಡಿ ಇತ್ತು. ಇದನ್ನು ವರದಾಂಜನೇಯ ಎನ್ನುತ್ತಿದ್ದರು. ಇಲ್ಲಿ ಸುಂದರವಾದ ಕೊಳ ಇತ್ತು ಎಂದು ಹಿರಿಯರು ಹೇಳಿದ್ದು, ಇದಕ್ಕಾಗಿ ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎಂದರು
"ಕಾಲೇಜಿನ ಹೊಸ ಕಟ್ಟಡಕ್ಕೆ ಪಾಯ ತೆಗೆಯುವ ವೇಳೆ ಶಿಲಾ ಶಾಸನಗಳು ಪತ್ತೆಯಾಗಿದೆ. ಇದು ನೂರಾರು ವರ್ಷಗಳಷ್ಟು ಹಳೆಯ ಪ್ರದೇಶ. ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡುವುದು ಬೇಡ.ಸ್ಥಳವನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ. ಈ ಸಂಬಂಧ ಮುಜರಾಯಿ ಇಲಾಖೆ, ಬಿಬಿಎಂಪಿ ಜೊತೆ ಮಾತನಾಡಿದ್ದು ಅಗತ್ಯ ಕ್ರಮಕ್ಕೆ ಮುಂದಾಗಿದ್ದೇನೆ" ಶಾಸಕರು ಹೇಳಿದ್ದಾರೆ.
ವಾಣಿ ವಿಲಾಸ ಶಿಕ್ಷಣ ಸಂಸ್ಥೆ ಒಡೆತನದ ಜಾಗದಲ್ಲಿ ಕಾಲೇಜಿನ ಹೊಸ ಕಟ್ಟಡಕ್ಕೆಂದು ಪಾಯ ತೋಡಿದ್ದಾಗ ಜಲಕಂಠೇಶ್ವರ ದೇಗುಲದ ಹತ್ತಿರ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆಯಾಗಿದ್ದವು.