ಆರ್ಥಿಕ ಅಪರಾಧಗಳಿಗಾಗಿ ಪ್ರತ್ಯೇಕ ಠಾಣೆ ಆರಂಭ: ಸಿಎಂ ಯಡಿಯೂರಪ್ಪ
ಕರ್ನಾಟಕ ರಾಜ್ಯವು ರಾಷ್ಟ್ರದಲ್ಲೇ ಉತ್ತಮ ಪೊಲೀಸ್ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಆರ್ಥಿಕ ಅಪರಾಧಗಳಿಗಾಗಿ ಪ್ರತ್ಯೇಕ ಪೊಲೀಸ್ ಠಾಣೆ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
Published: 07th January 2021 04:57 PM | Last Updated: 07th January 2021 05:08 PM | A+A A-

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಬೆಂಗಳೂರು: ಕರ್ನಾಟಕ ರಾಜ್ಯವು ರಾಷ್ಟ್ರದಲ್ಲೇ ಉತ್ತಮ ಪೊಲೀಸ್ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಆರ್ಥಿಕ ಅಪರಾಧಗಳಿಗಾಗಿ ಪ್ರತ್ಯೇಕ ಪೊಲೀಸ್ ಠಾಣೆ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 77 ಜನ ಅಧಿಕಾರಿಗಳು, ಸಿಬ್ಬಂದಿಗೆ 2018-19 ಸಾಲಿನ ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಘೋಷಣೆಯಾದ ರಾಷ್ಟ್ರಪತಿಗಳ ಪದಕಗಳ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಪೊಲೀಸರ ಅಪ್ರತಿಮ ಸೇವೆ ಗುರುತಿಸಿ ರಾಷ್ಟ್ರಪತಿ ಪದಕ ನೀಡಲಾಗುತ್ತಿದೆ. ಹಲವು ಸೂಕ್ಷ್ಮ ಪ್ರಕರಣಗಳನ್ನು ಖಾಕಿ ಪಡೆ ಬೇಧಿಸಿದೆ. ನ್ಯಾಯ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದ್ದು, ಅಮಾಯಕರಿಗೆ ರಕ್ಷಣೆ ನೀಡಿದೆ. ನಮ್ಮ ಪೊಲೀಸರು ಅಪ್ರತಿಮ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.
ನಗರದ ಎಂಟು ವಿಭಾಗಗಳಲ್ಲೂ ಸೈಬರ್ ಮತ್ತು ನಾರ್ಕೋಟಿಕ್ ಅಪರಾಧಗಳ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವುದರೊಂದಿಗೆ ಆರ್ಥಿಕ ಅಪರಾಧ ಠಾಣೆಗಳನ್ನು ಆರಂಭಿಸಲಾಗುವುದು. ಜ. 15 ಮತ್ತು 16ರಂದು ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಸಿಲಿಕಾನ್ ಸಿಟಿಗೆ ಆಗಮಿಸಲಿದ್ದು, ಪೊಲೀಸರಿಗೆ 2025ರ ವಸತಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ವಿಜೇತರಿಗೆ ಪದಕ ಪ್ರದಾನ ಮಾಡಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ, ಪೊಲೀಸರ ಕೆಲಸ ಗಂಡಸ್ಥನದ ಕಾರ್ಯವಾಗಿದೆ. ಪ್ರತಿಭಟನೆ, ಗಲಭೆ, ಆಪತ್ಕಾಲ್ ದಲ್ಲಿ ಜನರ ರಕ್ಷಣೆ ಸೇರಿ ಹಲವು ಕಾರ್ಯದಲ್ಲಿ ಮೊದಲಿಗೆ ಪೊಲೀಸರು ಮುಂದಾಗುತ್ತಾರೆ. ರಾಷ್ಟ್ರಪತಿ ಪದಕ ಗಿಟ್ಟಿಸಿಕೊಳ್ಳುವುದು ದೊಡ್ಡ ವಿಷಯವಲ್ಲ. ಆದರೆ, ಆ ಗೌರವವನ್ನು ಕಾಪಾಡಿಕೊಂಡು ಸಾಗುವುದು ದೊಡ್ಡದ್ದು ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆಯಡಿ ಆರೋಪಿಗಳ ಬೇಟೆಯಾಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಪತ್ತೆಯಾದ ಮಾದಕ ವಸ್ತು ಪ್ರಕರಣಗಳಷ್ಟೇ ಪ್ರಕರಣಗಳನ್ನು, ಕಳೆದ 10 ತಿಂಗಳಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.
ನಮ್ಮ ಸಾಮಾಜಿಕ ಜವಾಬ್ದಾರಿ ಹೊಣೆಗಾರಿಕೆ ಮತ್ತು ಭದ್ರತೆ ವಿಷಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದು, ಭವಿಷ್ಯದಲ್ಲಿ ಮತ್ತಷ್ಟು ಚಾಕ ಚಕ್ಕತೆಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ ಎಂಬ ಉದ್ದೇಶದಿಂದ ಪದಕ ಪ್ರದಾನ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.