ಒಣಗಿ ಹಾಕಿದ್ದ ಜೋಳ ತುಳಿದ ಹಸು: ಮೇಲ್ಜಾತಿಯ ಯುವಕರಿಂದ ದಲಿತ ಮಹಿಳೆ, ಮಗನ ಮೇಲೆ ಹಲ್ಲೆ
ಕ್ಷುಲ್ಲಕ ಕಾರಣಕ್ಕಾಗಿ ದಲಿತ ಮಹಿಳೆ ಮತ್ತು ಆಕೆಯ ಮಗನ ಮೇಲೆ ಮೇಲ್ಜಾತಿಯ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಿನ ಹಾಡಿಹಳ್ಳಿ ಗ್ರಾಮದಲ್ಲಿ ನಡೆದಿದೆ
Published: 08th January 2021 08:40 AM | Last Updated: 08th January 2021 12:30 PM | A+A A-

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕಾಗಿ ದಲಿತ ಮಹಿಳೆ ಮತ್ತು ಆಕೆಯ ಮಗನ ಮೇಲೆ ಮೇಲ್ಜಾತಿಯ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಿನ ಹಾಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಲಿತ ಕುಟುಂಬಕ್ಕೆ ಸೇರಿದ ಹಸು ಒಂದು ಮೇಲ್ಜಾತಿಯ ಕುಟುಂಬದವರು ಮನೆಯ ಮುಂದೆ ಒಣಗಲು ಹಾಕಿದ ಮೆಕ್ಕೆ ಜೋಳದ ಮೇಲೆ ಹೆಜ್ಜೆ ಹಾಕಿದ್ದಕ್ಕೆ ಈ ಘಟನೆ ನಡೆದಿದೆ. ಬುಧವಾರ ರಾತ್ರಿ 7.30ಕ್ಕೆ ದೂರು ದಾಖಲಾಗಿದೆ.
ಗಾಯಗೊಂಡ ಸಿದ್ದಮ್ಮ ಮತ್ತು ಆಕೆಯ ಪುತ್ರ ಪೂರ್ಣೇಶ್ ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಟುಂಬವು ಮೆಕ್ಕೆಜೋಳದ ಬೆಳೆ ಕೊಯ್ಲು ಮಾಡಿ ಉತ್ಪನ್ನಗಳನ್ನು ಮನೆಯ ಬಳಿ ಸಂಗ್ರಹಿಸಿತ್ತು.
ಪೂರ್ಣೇಶ್ ತನ್ನ ಹಸುಗಳನ್ನು ಮನೆಗೆ ಕರೆದೊಯ್ಯುತ್ತಿದ್ದ ಈ ವೇಳೆ ಒಂದು ಹಸು ತನ್ನ ದಿಕ್ಕನ್ನು ಬದಲಾಯಿಸಿ ಮನೆಯ ಹತ್ತಿರ ಮೆಕ್ಕೆ ಜೋಳದ ಮೇಲೆ ನಡೆಯಿತು. ಇದರಿಂದ ಕೋಪಗೊಂಡ ಮೇಲ್ಜಾತಿಯ ಯುವಕರು ಆತನೊಂದಿಗೆ ಜಗಳವಾಡಿ ಆತನ ಮನೆಯ ಹಿಂದಿನ ಬಾಗಿಲನ್ನು ಮರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮನೆಯೊಳಗೆ ನುಗ್ಗಿದ ಯುವಕರು ತಾಯಿ ಮತ್ತು ಮಗನನ್ನು ಎಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಈ ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಉಪ ಡಿವೈಎಸ್ ಪಿ ಪ್ರಭು ಸ್ಥಳಕ್ಕೆ ತೆರಳಿ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅಹಿತಕರ ಘಟನ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇವಣ್ಣ ಆಸ್ಪತ್ರೆಗೆ ಭೇಟಿ ನೀಡಿ ತಾಯಿ-ಮಗನಿಂದ ಮಾಹಿತಿ ಸಂಗ್ರಹಿಸಿದ್ದಾರೆ. ವಿನಯ್, ಭರತ್. ಪರ್ವತೇಗೌಡ ಹಾಗೂ ಮಂಜೇಗೌಡ ಆರೋಪಿಗಳಾಗಿದ್ದಾರೆ.
ಏತನ್ಮಧ್ಯೆ, ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ದಲಿತ ಮುಖಂಡರು ಹಲ್ಲೆಕೋರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಡಳಿತವನ್ನು ಒತ್ತಾಯಿಸಿದ್ದಾರೆ. ಆರೋಪಿಗಳಿಗೆ ಊರಿನಿಂದ ಬಹಿಷ್ಕಾರ ಹಾಕುವಂತೆ ಅವರು ಜಿಲ್ಲಾ ಪೊಲೀಸ್ ಅಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಇದುವರೆಗೂ ಯಾರನ್ನೂ ಬಂಧಿಸಿಲ್ಲ, ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಅಧಿಕಾರಿ ಪ್ರಭು ತಿಳಿಸಿದ್ದಾರೆ.