ರಾಜ್ಯದಲ್ಲಿ ಲಸಿಕೆ‌ ಸಂಗ್ರಹಕ್ಕೆ ಸಿದ್ಧತೆ ಪೂರ್ಣ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ರಾಜ್ಯದಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ವಿತರಣೆಗೂ ಸಿದ್ಧತೆ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ರಾಜ್ಯಕ್ಕೆ 13.90 ಲಕ್ಷ ಡೋಸ್ ಲಸಿಕೆ ಸಿಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Published: 10th January 2021 07:37 PM  |   Last Updated: 10th January 2021 07:37 PM   |  A+A-


DrSudhakar1

ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್

Posted By : Srinivas Rao BV
Source : Online Desk

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ವಿತರಣೆಗೂ ಸಿದ್ಧತೆ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ರಾಜ್ಯಕ್ಕೆ 13.90 ಲಕ್ಷ ಡೋಸ್ ಲಸಿಕೆ ಸಿಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಲಸಿಕೆ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಸಂಜೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ. ಈಗಾಗಲೇ ಪ್ರಧಾನಿಗಳು ಜನವರಿ 16 ರಿಂದ ಕೊರೊನಾ ಲಸಿಕೆ ನೀಡುವ ಬಗ್ಗೆ ತಿಳಿಸಿದ್ದಾರೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ 3 ಕೋಟಿ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ ಎಂದರು.

ರಾಜ್ಯದಲ್ಲಿ ಪ್ರಮುಖವಾಗಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ 2 ಲಸಿಕೆ ಸಂಗ್ರಹ ವ್ಯವಸ್ಥೆಗಳಿವೆ. ಇದಲ್ಲದೆ, ಚಿತ್ರದುರ್ಗ, ಕಲಬುರಗಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಬಾಗಲಕೋಟೆಯಲ್ಲಿ 5 ಪ್ರಾದೇಶಿಕ ಸಂಗ್ರಹ ವ್ಯವಸ್ಥೆ ಇದೆ. ಪ್ರತಿ ಜಿಲ್ಲೆಯಲ್ಲೂ ಒಂದು ಕಾರ್ಪೊರೇಷನ್ ಲಸಿಕೆ ಸಂಗ್ರಹ ವ್ಯವಸ್ಥೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 50 ಬ್ಲಾಕ್ ಇದೆ. 
ಒಟ್ಟು 2,767 ಕೋಲ್ಡ್ ಚೇನ್ ಪಾಯಿಂಟ್ ಗಳು ಇವೆ. ಇವೆಲ್ಲ ಮೂಲಸೌಕರ್ಯದೊಂದಿಗೆ ಲಸಿಕೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ 900 ಲಸಿಕೆ ಕ್ಯಾರಿಯರ್ ಗಳಿವೆ. ಲಸಿಕೆಯನ್ನು ಮೊದಲಿಗೆ ಪ್ರಾದೇಶಿಕ ಸಂಗ್ರಹ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ನಂತರ ಅಲ್ಲಿಂದ ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಬೆಂಗಳೂರಿನಲ್ಲಿ ಎರಡು ವಾಕ್ - ಇನ್  ಕೂಲರ್ ಇದೆ. ಒಂದರಲ್ಲಿ 45 ಲಕ್ಷ ಡೋಸ್ ಸಂಗ್ರಹಿಸಲು ಅವಕಾಶವಿದೆ. ಇದೇ ರೀತಿ ಒಂದು ವಾಕ್- ಇನ್ ಫ್ರೀಜರ್ ಇದೆ. ಅದರಲ್ಲಿ 40 ಲಕ್ಷ ಡೋಸ್ ಸಂಗ್ರಹ ಸಾಮರ್ಥ್ಯವಿದೆ. ಕೇಂದ್ರ ಸರ್ಕಾರ ಇನ್ನೂ ಒಂದು ವಾಕ್- ಇನ್ ಫ್ರೀಜರ್ ನೀಡಲಿದೆ ಎಂದರು.

ರಾಜ್ಯದಲ್ಲಿ ಎಲ್ಲ ಬಗೆಯ ಸಿದ್ಧತೆ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ 13.90 ಲಕ್ಷ ಕೊರೊನಾ ಲಸಿಕೆ ಬರಲಿದೆ. 24 ಲಕ್ಷ ಸಿರಿಂಜ್ ಗಳು ಕೇಂದ್ರದಿಂದ ಈಗಾಗಲೇ ಬಂದಿವೆ. ರಾಜ್ಯಕ್ಕೆ ಒಟ್ಟು  24 ಲಕ್ಷ ಡೋಸ್ ಬರಲಿದೆ ಎಂದು ವಿವರಿಸಿದರು.

ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಸಾರ್ವಜನಿಕರಿಗೆ ಲಸಿಕೆ ನೀಡಲು ಎರಡು ತಿಂಗಳು ಬೇಕಾಗಬಹುದು. ಪ್ರತಿಯೊಬ್ಬರಿಗೂ ಲಸಿಕೆ ಬೇಕೆ ಬೇಡವೇ ಎಂಬುದನ್ನು ತಜ್ಞರ ಸಲಹೆ ಮೇರೆಗೆ ಸರ್ಕಾರ ತೀರ್ಮಾನಿಸಲಿದೆ. ಸಾರ್ವಜನಿಕರಿಗೆ ಲಸಿಕೆ ನೀಡುವುದಾದರೂ ಮೊದಲಿಗೆ ವೃದ್ಧರು, ಅಶಕ್ತರಿಗೆ ನೀಡಲಾಗುವುದು ಎಂದರು.

ಸಚಿವರು ಹೇಳಿದ ಇತರೆ ಅಂಶಗಳು

ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಮಾಹಿತಿಯನ್ನು ಸಮರ್ಪಕವಾಗಿ ಕಲೆಹಾಕಿ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತಿದೆ. 

ಯು.ಕೆ‌.ಯಿಂದ ಬಂದ ವಿಮಾನದಲ್ಲಿ ಒಟ್ಟು 289 ಮಂದಿ ಇದ್ದರು. ಎಲ್ಲರ ಮಾದರಿ ಪಡೆದು ಪರೀಕ್ಷೆ ಮಾಡಿದ್ದು, ನಾಲ್ಕು ಮಂದಿಯ ಒಂದು ಪೂಲ್ ನಲ್ಲಿ ಕೊರೊನಾ ಸೋಂಕು ಬಂದಿದೆ. ಯಾರು ರೋಗಿ ಎಂದು ನಿಖರವಾಗಿ ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗುವುದು.

ಯಾರು ಬೇಕಾದರೂ ರಾಜಕೀಯ ಮುಖಂಡರೊಂದಿಗೆ ಫೋಟೋ ತೆಗೆದುಕೊಳ್ಳುತ್ತಾರೆ. ಯಾರೋ ಅಪರಾಧಿ ರಾಜಕಾರಣಿಗಳೊಂದಿಗೆ ಫೋಟೊ ತೆಗೆಸಿಕೊಂಡರೆ ಅದನ್ನೇ ರಾಜಕಾರಣಿಗಳ ತಪ್ಪು ಎನ್ನಲು ಸಾಧ್ಯವಿಲ್ಲ.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp