ಬೆಂಗಳೂರಿನ ಹೈ ಎಂಡ್ ಡ್ರಗ್ ಪಾರ್ಟಿಗಳಿಗೆ ವ್ಯವಸ್ಥೆ ಮಾಡುತ್ತಿದ್ದುದೇ ಆದಿತ್ಯ ಆಳ್ವ, ವೀರೇನ್ ಖನ್ನಾ: ಕಮಲ್ ಪಂಥ್
ಸತತ ನಾಲ್ಕು ತಿಂಗಳ ಪೊಲೀಸ್ ಬೇಟೆಯ ನಂತರ ಬೆಂಗಳೂರು ಸಿಟಿ ಪೊಲೀಸ್ ಇಲಾಖೆಯ ಕೇಂದ್ರ ಅಪರಾಧ ವಿಭಾಗ ಡ್ರಗ್ ಕೇಸಿನ ಪ್ರಮುಖ ಆರೋಪಿ, ಜೆಡಿಎಸ್ ನ ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವನನ್ನು ಬಂಧಿಸಿದೆ.
Published: 13th January 2021 10:31 AM | Last Updated: 13th January 2021 12:52 PM | A+A A-

ಪೊಲೀಸರ ಭದ್ರತೆಯೊಂದಿಗೆ ಬೆಂಗಳೂರಿಗೆ ಆದಿತ್ಯ ಆಳ್ವನನ್ನು ಕರೆತಂದ ಸಿಸಿಬಿ ಪೊಲೀಸರು
ಬೆಂಗಳೂರು: ಸತತ ನಾಲ್ಕು ತಿಂಗಳ ಪೊಲೀಸ್ ಬೇಟೆಯ ನಂತರ ಬೆಂಗಳೂರು ಸಿಟಿ ಪೊಲೀಸ್ ಇಲಾಖೆಯ ಕೇಂದ್ರ ಅಪರಾಧ ವಿಭಾಗ ಡ್ರಗ್ ಕೇಸಿನ ಪ್ರಮುಖ ಆರೋಪಿ, ಜೆಡಿಎಸ್ ನ ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವನನ್ನು ಬಂಧಿಸಿದೆ.
ನಿನ್ನೆ ಬೆಳಗ್ಗೆ ಚೆನ್ನೈನ ರೆಸಾರ್ಟ್ ವೊಂದರಿಂದ ಆದಿತ್ಯ ಆಳ್ವನನ್ನು ಬೆಂಗಳೂರಿಗೆ ಕರೆತರಲಾಯಿತು. ಮಾದಕ ವಸ್ತು ಬಳಕೆ, ಮಾರಾಟ, ಸಾಗಾಟ, ಸಂಗ್ರಹಣೆ ಕೇಸಿನಲ್ಲಿ ಆದಿತ್ಯ ಆಳ್ವ ಬಂಧನ ಪ್ರಮುಖ ಬೆಳವಣಿಗೆಯಾಗಿದೆ. ಆತ ಮತ್ತು ಈವೆಂಟ್ ಮ್ಯಾನೇಜರ್ ವೀರೇನ್ ಖನ್ನಾ ಬೆಂಗಳೂರು ನಗರದ ಹೈ ಎಂಡ್ ಡ್ರಗ್ ಪಾರ್ಟಿಗಳ ಪ್ರಮುಖ ಆಯೋಜಕರಾಗಿದ್ದರು ಎಂದು ತಿಳಿದುಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಕಮಲ್ ಪಂಥ್, ಕಳೆದ ಸೆಪ್ಟೆಂಬರ್ ನಿಂದ ಸಿಸಿಬಿ ಪೊಲೀಸರು ಆದಿತ್ಯ ಆಳ್ವನ ಬಂಧನಕ್ಕೆ ಬಲೆ ಬೀಸಿದ್ದರು. ಆದಿತ್ಯ ಆಳ್ವನಿಗೆ ಸಾಕಷ್ಟು ಪ್ರಭಾವಿ ವ್ಯಕ್ತಿಗಳ ಪರಿಚಯ ಮತ್ತು ಸಂಪರ್ಕವಿದೆ. ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ. ಸಿಸಿಬಿ ಪೊಲೀಸರು ಆತನ ಬಂಧನಕ್ಕೆ ಸಾಕಷ್ಟು ಯತ್ನಿಸಿದ್ದರು. ಮುಂಬೈ, ದೆಹಲಿ, ಗುರುಗ್ರಾಮ್ ಮತ್ತು ಮಂಗಳೂರುಗಳಲ್ಲಿ ಹುಡುಕಾಟ ನಡೆಸಿದ್ದರು. ಬಾಲಿವುಡ್ ನಟ ಆಳ್ವ ಸಂಬಂಧಿ ವಿವೇಕ್ ಒಬೆರಾಯ್ ಮನೆಯಲ್ಲಿ ಕೂಡ ಶೋಧ ನಡೆಸಿದ್ದರು. ಅಂತಾರಾಷ್ಟ್ರೀಯ ಗಡಿಭಾಗಗಳಿಗೆ ಸಹ ಹೋಗಿ ಹುಡುಕಾಡಿದ್ದರು, ಆತ ದೇಶ ಬಿಟ್ಟು ಹೋಗಲಿಲ್ಲ ಎಂದು ಖಚಿತವಾಗಿತ್ತು. ನಾವು ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದೆವು ಎಂದು ವಿವರಿಸಿದರು.
ಆದಿತ್ಯ ಆಳ್ವ ಡ್ರಗ್ ಕೇಸಿನಲ್ಲಿ ಭಾಗಿಯಾಗಿದ್ದಾನೆ ಎಂದು ಪತ್ತೆಯಾದ ನಂತರವೇ ಆತನ ಜೊತೆ ಡ್ರಗ್ ಕೇಸಿನಲ್ಲಿ ಭಾಗಿಯಾದ ಆರೋಪದ ಮೇಲೆ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ, ವೀರೇನ್ ಖನ್ನಾ ಮತ್ತು ಇತರರ ಬಂಧನವಾಗಿದ್ದು. ಆತ ಡ್ರಗ್ ದಂಧೆಯ ಪ್ರಮುಖ ರೂವಾರಿ. ಆತ ಮತ್ತು ವೀರೇನ್ ಖನ್ನಾ ನಗರದಲ್ಲಿ ಸಾಕಷ್ಟು ಡ್ರಗ್ ಪೂರೈಸುತ್ತಿದ್ದರು ಎಂದು ತನಿಖೆಯಿಂದ ಬಹಿರಂಗವಾಗಿದೆ ಎನ್ನುತ್ತಾರೆ ಪೊಲೀಸ್ ಆಯುಕ್ತ ಕಮಲ್ ಪಂಥ್.
ಕೆಲ ತಿಂಗಳ ಹಿಂದೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಕ್ಕೂ ಇತ್ತೀಚೆಗೆ ಅಪಾರ ಪ್ರಮಾಣದಲ್ಲಿ ಡ್ರಗ್ ವಶಪಡಿಸಿಕೊಂಡಿರುವುದರ ಮಧ್ಯೆ ಯಾವುದಾದರೂ ಸಂಬಂಧವಿದೆಯೇ ಎಂದು ಕೇಳಿದಾಗ, ಕಾಟನ್ ಪೇಟೆ ಡ್ರಗ್ ಕೇಸು ಮತ್ತು ಪೊಲೀಸರು ಅಪಾರ ಪ್ರಮಾಣದಲ್ಲಿ ಡ್ರಗ್ ವಶಪಡಿಸಿಕೊಂಡಿರುವ ಪ್ರಕರಣವನ್ನು ತಾಳೆ ಮಾಡಿ ನೋಡಲು ಸಾಧ್ಯವಿಲ್ಲ.ಇದು ಪೊಲೀಸರ ನಿರಂತರ ಕಾರ್ಯಾಚರಣೆ. ನಗರದ ಪ್ರತಿಷ್ಠಿತ ಹೊಟೇಲ್ ಗಳು, ಪಬ್-ಬಾರ್ ಗಳು ಮತ್ತು ಹೆಬ್ಬಾಳದ ಪ್ರತಿಷ್ಟಿತ ಆದಿತ್ಯ ಆಳ್ವನ ಹೌಸ್ ಆಫ್ ಲೈಫ್ ರೆಸಾರ್ಟ್ ನಲ್ಲಿ ಹೈ ಎಂಡ್ ಪಾರ್ಟಿಗಳ ವ್ಯವಸ್ಥೆ ಮಾಡುತ್ತಿದ್ದುದು ಇದೇ ಆದಿತ್ಯ ಆಳ್ವ ಮತ್ತು ವೀರೇನ್ ಖನ್ನಾ.
ಬೆಂಗಳೂರಿನಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಡ್ರಗ್ ಜಾಲವನ್ನು ಮಟ್ಟ ಹಾಕುವುದು ನಮ್ಮ ಉದ್ದೇಶವಾಗಿದೆ. ಇಷ್ಟು ದಿನ ಆದಿತ್ಯ ಆಳ್ವ ತಲೆಮರೆಸಿಕೊಳ್ಳಲು ಪೊಲೀಸರು ರಕ್ಷಣೆ ನೀಡಿರಲಿಲ್ಲ. ಹಾಗೆ ಒಂದು ವೇಳೆ ಮಾಡಿದ್ದಿದ್ದರೆ ಸುಪ್ರೀಂ ಕೋರ್ಟ್ ನಲ್ಲಿ ಆದಿತ್ಯ ಆಳ್ವಗೆ ಜಾಮೀನು ನೀಡದಂತೆ ಪ್ರತಿಅರ್ಜಿ ಸಲ್ಲಿಸುತ್ತಿರಲಿಲ್ಲ ಎಂದರು.