ಕೋವಿಡ್ ಸಂಕಷ್ಟದಲ್ಲೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಪುಟ ಸಮ್ಮತಿ

ಕೋವಿಡ್ ಸಂಕಷ್ಟ ಪರಿಸ್ಥಿತಿ ಸಂದರ್ಭದಲ್ಲಿ ಜನರ ವಿರೋಧದ ನಡುವೆ ರಾಜ್ಯದ ನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ಸಮ್ಮತಿಸಿದೆ.

Published: 13th January 2021 04:19 PM  |   Last Updated: 13th January 2021 04:19 PM   |  A+A-


Jc madhu swamy

ಜೆಸಿ ಮಾಧುಸ್ವಾಮಿ

Posted By : Lingaraj Badiger
Source : UNI

ಬೆಂಗಳೂರು: ಕೋವಿಡ್ ಸಂಕಷ್ಟ ಪರಿಸ್ಥಿತಿ ಸಂದರ್ಭದಲ್ಲಿ ಜನರ ವಿರೋಧದ ನಡುವೆ ರಾಜ್ಯದ ನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ಸಮ್ಮತಿಸಿದೆ.

ತೆರಿಗೆ ಪರಿಷ್ಕರಣೆ ಮಾಡುವ ಉದ್ದೇಶದಿಂದ ಕರ್ನಾಟಕ ಮುನ್ಸಿಫಲ್ ಕಾಯ್ದೆಗೆ ತಿದ್ದುಪಡಿ ತರಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ತೀರ್ಮಾನಿಸಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಸ್ತಿ ತೆರಿಗೆ ಹೆಚ್ಚಳ ಸಂಬಂಧ ತಿದ್ದುಪಡಿ ತರಲಾಗುತ್ತಿದೆ. ಖಾಲಿ ನಿವೇಶನಗಳಿಗೂ ತೆರಿಗೆ ವಿಧಿಸಲಿದ್ದು, ಒಂದು ಸಾವಿರ ಚದರ ಅಡಿಗಿಂತ ಕಡಿಮೆ ಇರುವ ನಿವೇಶನಗಳಿಗೆ ತೆರಿಗೆಯಿಂದ ವಿನಾಯಿತಿ ಇದೆ. ಸಾವಿರ ಚದರಡಿಗಿಂತ ಹೆಚ್ಚಿರುವ ಖಾಲಿ ನಿವೇಶನಗಳ ಆಸ್ತಿ ತೆರಿಗೆಯನ್ನು ಶೇ. ೦.೨ ಯಿಂದ ಶೇ. ೦.೫ಕ್ಕೆ ಹೆಚ್ಚಿಸಲಾಗುತ್ತದೆ. ಹಾಗೆಯೇ ಮನೆಗಳಿಗೆ ತೆರಿಗೆಯನ್ನು ಶೇ. ೧ ರಿಂದ ೧.೫ ರಷ್ಟು ಹೆಚ್ಚಿಸಲು ಈ ಕಾಯ್ದೆಯಲ್ಲಿ ಅವಕಾಶ ಇದೆ ಎಂದರು.

ಈ ಮೊದಲು ಆಸ್ತಿ ತೆರಿಗೆ ಲೆಕ್ಕಾಚಾರ ಹಾಕುವಾಗ ಆ ಆಸ್ತಿಯ ಮಾರ್ಗಸೂಚಿಯ ಶೇ. ೫೦ ರಷ್ಟು ಮೌಲ್ಯದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಈ ಪದ್ಧತಿಯನ್ನು ಕೈ ಬಿಟ್ಟು ಶೇ. ೨೫ ರಷ್ಟು ಮಾರುಕಟ್ಟೆ ದರದ ಮೇಲೆ ಆಸ್ತಿ ತೆರಿಗೆ ವಿಧಿಸಲು ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಖಾಲಿ ನಿವೇಶನಗಳ ಮಾರುಕಟ್ಟೆ ದರದ ಶೇ. ೨೫ ರಷ್ಟು ದರಕ್ಕೆ ಆಸ್ತಿ ತೆರಿಗೆ ವಿಧಿಸಲಾಗುತ್ತದೆ ಎಂದು ಅವರು ಹೇಳಿದರು. 

ಬೆಂಗಳೂರಿನ ಪುಷ್ಪ ಹರಾಜು ಕೇಂದ್ರದ ಸೊಸೈಟಿಯಲ್ಲಿ ಸರ್ಕಾರದ ಇ-ಟೆಂಡರ್ ಪಾಲನ್ನು ಹೆಚ್ಚಿಸಲು, ಹಾಗೆಯೇ ಪುಷ್ಪ ಹರಾಜು ಕೇಂದ್ರದ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ತೀರ್ಮಾನವನ್ನು ಸಹ ಕೈಗೊಳ್ಳಲಾಗಿದೆ ಎಂದರು. 

ಆದಿಚುಂಚನಗಿರಿ ಹಿರಿಯ ಶ್ರೀಗಳಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮ ಸ್ಥಳವಾದ ರಾಮನಗರ ಜಿಲ್ಲೆಯ ಬಾನಂದೂರು ಗ್ರಾಮದಲ್ಲಿ ೨೫ ಕೋಟಿ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರ ನಿರ್ಮಾಣ ಮಾಡುವ, ಬೆಂಗಳೂರಿನ ನಾಗವಾರದಲ್ಲಿ ಕಾರ್ಲೆ ಸಂಸ್ಥೆಗೆ ೨೭ ಗುಂಟೆ ಜಮೀನನ್ನು ಮಾರುಕಟ್ಟೆ ದರದಲ್ಲಿ ನೀಡಲು ಸಂಪುಟ ಸಮ್ಮತಿ ಸೂಚಿಸಿದೆ ಎಂದು ಅವರು ಹೇಳಿದರು.
 
ರಾಜ್ಯದ ೨೭೦ ಸರ್ಕಾರಿ ಐಟಿಐಗಳ ಪೈಕಿ ೧೫೦ ಐಟಿಐಗಳನ್ನು ಟಾಟಾ ಟೆಕ್ನಾಲಜಿ ಸಂಸ್ಥೆಯ ಸಹಯೋಗದಲ್ಲಿ ೪ ಸಾವಿರ ಕೋಟಿ ರೂ. ವೆಚ್ಚ ಮಾಡಿ ಐಟಿಐಗಳನ್ನು ಮೇಲ್ದರ್ಜೆಗೇರಿಸುತ್ತಿದ್ದು, ಇದರಲ್ಲಿ ಟಾಟಾ ಅವರ ಪಾಲು ಶೇ. ೮೮ ರಷ್ಟಿದ್ದು, ರಾಜ್ಯ ಸರ್ಕಾರ ಉಳಿದ ಪಾಲನ್ನು ಭರಿಸಬೇಕಿದ್ದು, ಇದಕ್ಕಾಗಿ ೧೫೦ ಕೋಟಿ ರೂ.ಗಳನ್ನು ಮೂಲಭೂತ ಸೌಕರ್ಯಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದರು. 

ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಬಡ್ತಿ ಪಡೆಯಲು ಅನುವಾಗುವಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಜತೆಗೆ, ಜಲಸಂಪನ್ಮೂಲ ಇಲಾಖೆಯ ಉನ್ನತ ಕೇಂದ್ರ ನಿರ್ವಹಣಾ ಆಡಳಿತ ಮಂಡಳಿಗಳನ್ನು ಪುನರ್ ರಚಿಸಲು ಸಂಪುಟ ಸಮ್ಮತಿಸಿದೆ ಎಂದರು. 

ಪೊಲೀಸ್ ವಸತಿ ಗೃಹ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದ್ದು, ೨೦೦೦ ಕೋಟಿ ಅನುದಾನದಲ್ಲಿ ೧೦ ಸಾವಿರ ಮನೆ ನಿರ್ಮಾಣ ಮಾಡಲಿದ್ದು, ೫ ವರ್ಷದಲ್ಲಿ ಈ ಯೋಜನೆ ಮುಕ್ತಾಯವಾಗಲಿದೆ. ಈ ಮೂಲಕ ಪೊಲೀಸರ ವಸತಿ ಸಮಸ್ಯೆ ನಿವಾರಣೆಗೆ ಸರ್ಕಾರ ಒತ್ತು ನೀಡಿದೆ ಎಂದರು.

ತುಮಕೂರು ಜಿಲ್ಲೆಯ ತಿಪಟೂರಿನ ೯೬ ಕೆರೆಗಳಿಗೆ ಎತ್ತಿನಹೊಳೆಯಿಂದ ನೀರು ಹರಿಸುವ 200 ಕೋಟಿ ರೂ ವೆಚ್ಚದ ಯೋಜನೆಗೂ ಅನುಮೋದನೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಅನಗೋಡಿನಲ್ಲಿ ಕ್ರಶರ್ ಘಟಕ ನಿರ್ಮಾಣ ಪ್ರಸ್ತಾವನೆಗೂ ಸಹ ಒಪ್ಪಿಗೆ ನೀಡಲಾಗಿದೆ ಎಂದು ಜೆ.ಸಿ. ಮಾಧುಸ್ವಾಮಿ ಹೇಳಿದರು.

ಕೋವಿಡ್ ವೇಳೆ ರೇಷ್ಮೆ ಗೂಡಿಗೆ ಧಾರಣೆ ಕುಸಿದಿತ್ತು. ಇವರ ನೆರವಿಗೆ ಬರುವ ಉದ್ದೇಶದಿಂಧ ೧೫ ಕೋಟಿ ಅನುದಾನ ನೀಡಲು ಸಮ್ಮತಿಸಲಾಗಿದೆ. ಚಿತ್ರದುರ್ಗದ ಮುರುಗಾ ಮಠದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ನಿರ್ಧರಿಸಿದ್ದು, ೧೫ ಕೋಟಿ ವೆಚ್ಚದಲ್ಲಿ ೩೨೫ ಅಡಿ ಎತ್ತರದ ಪುತ್ಥಳಿ ನಿರ್ಮಾಣ ಮಾಡಲಾಗುವುದು ಎಂದರು.

Stay up to date on all the latest ರಾಜ್ಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp