
ಸಂಗ್ರಹ ಚಿತ್ರ
ರಾಮನಗರ: ಸುಮಾರು ಎರಡು ತಿಂಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸಿದ್ದ ಟೊಯೋಟಾ ಕಂಪನಿ ಮಂಗಳವಾರದಿಂದ ಮತ್ತೆ ಕಾರ್ಯಾರಂಭ ಮಾಡಿದೆ.
ಸರ್ಕಾರ, ಕಾರ್ಮಿಕರು ಮತ್ತು ಕಂಪನಿಯ ಆಡಳಿತ ಮಂಡಳಿ ನಡುವೆ ನಡೆದ ಹಲವು ಸಂಧಾನ ಸಭೆಗಳು ವಿಫಲಗೊಂಡಿದ್ದವು. ಕಳೆದ 65 ದಿನಗಳಿಂದ ನಿರಂತರವಾಗಿ ಕಾರ್ಮಿಕರು ಹೋರಾಟ ನಡೆಸಿದ ಹಿನ್ನಲೆಯಲ್ಲಿ ಇಂದಿನಿಂದ ಎರಡನೇ ಪಾಳಿಯಲ್ಲಿ ಕಾರ್ಖಾನೆ ಉತ್ಪಾದನೆ ಪ್ರಾರಂಭಿಸುತ್ತಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ವಿರುದ್ಧ ನಡೆಸುತ್ತಿರುವ ಅಕ್ರಮ ಮುಷ್ಕರದ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್ 23 ರಂದು ಎರಡನೇ ಬಾರಿಗೆ ಕಂಪನಿ ಲಾಕ್ಔಟ್ ಘೋಷಣೆ ಮಾಡಿತ್ತು.
ಇದರ ನಡುವೆಯೂ ಕಂಪನಿಯು 1200 ಕಾರ್ಮಿಕರ ಸಹಕಾರದೊಂದಿಗೆ ಉತ್ಪಾದನೆಯನ್ನು ಪುನರಾರಂಭಿಸಿತ್ತು. ಕಾರ್ಮಿಕರು ತೋರಿದ ಉತ್ತಮ ನಡವಳಿಕೆ, ಕೆಲಸದಲ್ಲಿನ ಕಾರ್ಮಿಕರ ಶಿಸ್ತುನ್ನು ಕಂಪನಿ ಗಮನದಲ್ಲಿಟ್ಟುಕೊಂಡು ಲಾಕ್ಔಟ್ ತೆರವುಗೊಳಿಸುವ ನಿರ್ಧಾರ ಮಾಡಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರ ನೇತೃತ್ವದಲ್ಲಿ ನಡೆದ ಸಭೆಯ ನಂತರದಲ್ಲಿ ಟಿಕೆಎಂ ನಿರ್ವಹಣೆ, ಕಂಪನಿಯ ಒಳ, ಹೊರಗೆ ಶಿಸ್ತು ಮತ್ತು ಉತ್ಪಾದಕತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ ಲಾಕ್'ಔಟ್ ಹಿಂತೆಗೆದುಕೊಂಡಿರುವುದಾಗಿ ಟೊಯೋಟಾ ಕಿರ್ಲೋಸ್ಕರ್ ಕಂಪನಿ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ.
ಈ ನಡುವೆ ಕಾರ್ಮಿಕರು ಮಾತ್ರ ತಮ್ಮ ಬೇಡಿಕೆ ಈಡೇರುವವರೆಗೂ ಕಲಸಕ್ಕೆ ಹಾಜರಾಗಲ್ಲ ಎಂದು ಪಟ್ಟು ಹಿಡಿದು ಮುಷ್ಕರ ಮುಂದುವರೆಸಿದ್ದಾರೆ. ಕಾರ್ಮಿಕರು ಮತ್ತು ಅವರ ಕುಟುಂಬಗಳು, ಕಂಪನಿ ಹಿತದೃಷ್ಟಿಯಿಂದ ಲಾಕ್' ಔಟ್ ಹಿಂತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟೊಯೋಟಾ ವಕ್ತಾರರು ತಿಳಿಸಿದ್ದಾರೆ.
ಜನವರಿ 12ರಿಂದ ಬಿಡದಿಯ ಎರಡೂ ಸ್ಥಾವರಗಳ ಬೀಗ ಮುದ್ರೆ ತೆರವುಗೊಳಿಸಲಿದ್ದು, ನೌಕರರು ಉತ್ತಮ ನಡವಳಿಕೆ ಮತ್ತು ಕೆಲಸಕ್ಕೆ ವರದಿ ಮಾಡುವ ಒಪ್ಪಂದ ಪತ್ರಕ್ಕೆ ಸಹಿ ಹಾಕಿ ಕೆಲಸಕ್ಕೆ ಹಾಜರಾಗುವ ಷರತ್ತುನ್ನು ಕಂಪನಿ ವಿಧಿಸಿದೆ. ಗಂಭೀರ ದುಷ್ಕೃತ್ಯಗಳಿಗಾಗಿ ಅಮಾನತ್ತುಗೊಂಡಿರುವ 66 ನೌಕರರ ವಿಚಾರಣೆ ಮುಂದುವರೆಯುವುದು ಎಂದು ಕಂಪನಿಯು ಇದೇ ವೇಳೆ ಹೇಳಿದೆ.