
ಕೋವಿಡ್ ಲಸಿಕೆ
ಬೆಂಗಳೂರು: ಪ್ರಾಥಮಿಕ ಹಂತದಲ್ಲಿ ಕೋವಿಡ್ ಲಸಿಕೆ ಪಡೆಯುವ ಆರೋಗ್ಯ ಕಾರ್ಯಕರ್ತ ಆರೋಗ್ಯದ ಮೇಲೆ ತಜ್ಞರು ತೀವ್ರ ನಿಗಾ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಲಸಿಕೆ ನೀಡುವ ವೇಳೆ ಪ್ರತಿ ಲಸಿಕೆ ಕೇಂದ್ರಕ್ಕೂ ಸೇವೆ ಒದಗಿಸಲು ಆಂಬ್ಯುಲೆನ್ಸ್ ಸಜ್ಜಾಗಿರಲಿದೆ. ಲಸಿಕೆ ಪಡೆದವರ ಆರೋಗ್ಯ ಏರುಪೇರಾದರೆ ಕೂಡಲೆ ಗೊತ್ತುಪಡಿಸಲಾದ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಕರೆದೊಯ್ಯಲಾಗುತ್ತದೆ ಎಂದು ಹೇಳಿದರು.
ಲಸಿಕೆ ವಿತರಣಾ ಕಾರ್ಯಕ್ರಮದ ಮೊದಲ ಹಂತದ ಭಾಗವಾಗಿ ಇಂದಿನಿಂದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, ನಿರ್ಧಿಷ್ಠ ಕೇಂದ್ರಗಳಲ್ಲಿ ಗೊತ್ತುಪಡಿಸಲಾದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಪಡೆದ ನಂತರ ಅವರ ಆರೋಗ್ಯ ಮೇಲ್ವಿಚಾರಣೆ ನಡೆಯಲಿದ್ದು, ತಜ್ಞರ ಒಂದು ತಂಡಕ್ಕೆ ಈ ಜವಾಬ್ದಾರಿ ನೀಡಲಾಗಿದೆ. ಅಂತೆಯೇ ಆಂಬ್ಯುಲೆನ್ಸ್ ಸಜ್ಜಾಗಿರಲಿದ್ದು. ಲಸಿಕೆ ಪಡೆದವರ ಆರೋಗ್ಯ ಏರುಪೇರಾದರೆ ಕೂಡಲೆ ಗೊತ್ತುಪಡಿಸಲಾದ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಕರೆದೊಯ್ಯಲಾಗುತ್ತದೆ ಎಂದು ಹೇಳಿದರು.
‘ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಬಿಬಿಎಂಪಿಯ ಎಲ್ಲಾ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಎರಡನೇ ಹಂತದಲ್ಲಿ ಲಸಿಕೆ ಲಭ್ಯವಾಗಲಿದ್ದು, ಅವರ ಪಟ್ಟಿಯನ್ನೂ ಸಿದ್ದಪಡಿಸಲಾಗುತ್ತಿದೆ. ಫಲಾನುಭವಿಗಳು ಎಷ್ಟು ಮಂದಿ ಇರುತ್ತಾರೆ ಎಂಬ ಆಧಾರದಲ್ಲಿ ಎರಡನೇ ಹಂತದಲ್ಲಿ ಲಸಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಕಾಲೇಜುಗಳನ್ನೂ ಈ ಉದ್ದೇಶಕ್ಕೆ ಬಳಸಿಕೊಳ್ಳಲಿದ್ದೇವೆ. ಈಗಾಗಲೇ ಕೆಲವು ಕಾಲೇಜುಗಳನ್ನು ಗುರುತಿಸಿದ್ದೇವೆ’ ಎಂದರು.
‘50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಮೂರನೇ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. 50 ವರ್ಷಕ್ಕಿಂತ ಕೆಳಗಿರುವವರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ಅಂತಹವರಿಗೂ ಲಸಿಕೆ ನೀಡಲಾಗುತ್ತದೆ. 50 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಯ ಆಧಾರದಲ್ಲಿ ಗುರುತಿಸುತ್ತೇವೆ’ ಎಂದು ತಿಳಿಸಿದರು.