ಬೆಂಗಳೂರು: ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದ ಕೋವಿಡ್ ಲಸಿಕೆ: ಆಯುಕ್ತ ಮಂಜುನಾಥ್ ಪ್ರಸಾದ್
ನಿರೀಕ್ಷೆಯಂತೆಯೇ ಕೋವಿಡ್ ಲಸಿಕೆಗಳು ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದು, ಪ್ರಾಥಮಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.
Published: 14th January 2021 09:02 AM | Last Updated: 14th January 2021 09:02 AM | A+A A-

ಕೊರೋನಾ ಲಸಿಕೆ ವಿತರಣೆ
ಬೆಂಗಳೂರು: ನಿರೀಕ್ಷೆಯಂತೆಯೇ ಕೋವಿಡ್ ಲಸಿಕೆಗಳು ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದು, ಪ್ರಾಥಮಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.
ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರಿಗೆ ನೀಡುವ ಸಲುವಾಗಿ ಸರ್ಕಾರವು ಬಿಬಿಎಂಪಿಗೆ ಮೊದಲ ಹಂತದಲ್ಲಿ 1,05,000 ಕೋವಿಶೀಲ್ಡ್ ಲಸಿಕೆಗಳನ್ನು ಹಂಚಿಕೆ ಮಾಡಿದ್ದು. ಈ ಲಸಿಕೆಗಳನ್ನು ದಾಸಪ್ಪ ಆಸ್ಪತ್ರೆಯ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಡಲಾಗಿದೆ. ಆನಂದರಾವ್ ವೃತ್ತದ ಆರೋಗ್ಯ ಇಲಾಖೆ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದ ಲಸಿಕೆಗಳನ್ನು ದಾಸಪ್ಪ ಆಸ್ಪತ್ರೆಯ ದಾಸ್ತಾನು ಕೇಂದ್ರಕ್ಕೆ ಬುಧವಾರ ರವಾನಿಸಲಾಯಿತು. ಆಸ್ಪತ್ರೆಯ ಐಸ್ ಲೈನ್ ರೆಫ್ರಿಜರೇಟರ್ಗಳಲ್ಲಿ ಅವುಗಳನ್ನು ಶೇಖರಿಸಿಡಲಾಯಿತು.
ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್ ಹಾಗೂ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ವಿಜಯೇಂದ್ರ ಅವರು ಲಸಿಕೆಗಳನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಎನ್.ಮಂಜುನಾಥ್ ಪ್ರಸಾದ್ ಅವರು, ‘ಮೊದಲನೇ ಕಂತಿನಲ್ಲಿ ಲಸಿಕೆ ನೀಡಲು 1.70 ಲಕ್ಷ ಫಲಾನುಭವಿಗಳನ್ನು ಗುರುತಿಸಿದ್ದೇವೆ. ಸರ್ಕಾರ ಸದ್ಯಕ್ಕೆ 1.05 ಲಕ್ಷ ಕೋವಿಶೀಲ್ಡ್ ಲಸಿಕೆಗಳನ್ನು ಮಾತ್ರ ನಮಗೆ ಹಸ್ತಾಂತರಿಸಿದೆ. ಉಳಿದ ಲಸಿಕೆಗಳನ್ನು ಮುಂದಿನ ಕಂತಿನಲ್ಲಿ ನೀಡಲಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದೇ 16ರಂದು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ 760 ಕಡೆ ಲಸಿಕಾ ಕೇಂದ್ರಗಳನ್ನು ಗುರುತಿಸಿದ್ದೇವೆ. ಅವುಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ನಗರದ ಸರ್ಕಾರಿ ಆಸ್ಪತ್ರೆ, ಜಯನಗರದ ಸರ್ಕಾರಿ ಆಸ್ಪತ್ರೆ, ಸೆಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಒಟ್ಟು ಆರು ಕೇಂದ್ರಗಳಲ್ಲಿ ಮಾತ್ರ ಇದೇ 16ರಿಂದ ಲಸಿಕೆ ನೀಡಲಾಗುತ್ತದೆ. ಉಳಿದ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಸೂಚನೆ ಬಂದ ಬಳಿಕ ಲಸಿಕೆ ನೀಡಲು ಶುರು ಮಾಡುತ್ತೇವೆ ಎಂದರು.
ಇನ್ನು ಎರಡನೇ ಹಂತದಲ್ಲಿ ಎಲ್ಲಾ ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಮತ್ತು ಕಂದಾಯ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಮೂರನೇ ಹಂತದಲ್ಲಿ ಮತದಾರರ ಪಟ್ಟಿಯ ಪ್ರಕಾರ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕೊಮೊರ್ಬಿಡಿಟಿ ಹೊಂದಿರುವವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.