ರಾಜ್ಯದ 243 ಕಡೆ ಕೊರೋನಾ ಲಸಿಕೆ ವಿತರಣೆ: 237 ಕಡೆ ಕೋವಿಶೀಲ್ಡ್, 6 ಕಡೆ ಕೋವ್ಯಾಕ್ಸಿನ್ - ಸುಧಾಕರ್

ರಾಜ್ಯದ 243 ಕಡೆಗಳಲ್ಲಿ ಶನಿವಾರ(ಜನವರಿ 16) ಕೊರೊನಾ ಲಸಿಕೆ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ 10 ಕಡೆಗಳಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

Published: 15th January 2021 07:10 PM  |   Last Updated: 15th January 2021 07:10 PM   |  A+A-


Dr.k sudhakar

ಡಾ.ಕೆ ಸುಧಾಕರ್

Posted By : Vishwanath S
Source : UNI

ಬೆಂಗಳೂರು: ರಾಜ್ಯದ 243 ಕಡೆಗಳಲ್ಲಿ ಶನಿವಾರ(ಜನವರಿ 16) ಕೊರೊನಾ ಲಸಿಕೆ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ 10 ಕಡೆಗಳಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ಒಂದರಲ್ಲೇ 10 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು. ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆಗೆ ವ್ಯವಸ್ಥೆ ಮಾಡಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯದ 237 ಕೇಂದ್ರ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಬಳ್ಳಾರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ ಕೇಂದ್ರಗಳಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಲಸಿಕೆ ನೀಡಲು ಮೊದಲಿಗೆ ಜನಪ್ರತಿನಿಧಿಗಳನ್ನೇ ಆರಿಸಬಹುದಿತ್ತು. ಆದರೆ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವವರಿಗೆ ಮೊದಲ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುತ್ತಿದೆ. ಬಳಿಕ ಇತರೆ ರೋಗಗಳಿಂದ ಬಳಲುವವರಿಗೆ ಆದ್ಯತೆ ಎಂದರು.
ಪ್ರಸ್ತುತ 7,17,439 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಮೊದಲ ದಿನ 24,300 ಮಂದಿಗೆ ನೀಡುವ ಗುರಿ ಇದೆ. ನಮ್ಮಲ್ಲಿ ಒಟ್ಟು 8,14,500 ಡೋಸ್ ಲಸಿಕೆ ಲಭ್ಯವಿದ್ದು, ಒಂದು ವಾರದೊಳಗೆ ಮೊದಲ ಹಂತದ ವಿತರಣೆ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ ಎಂದರು.

ಲಸಿಕೆಯಿಂದ ಅಡ್ಡಪರಿಣಾಮ ಉಂಟಾದರೆ, ಸ್ಥಳದಲ್ಲೇ ತುರ್ತು ಚಿಕಿತ್ಸೆ ವ್ಯವಸ್ಥೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಿ ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಸರ್ಕಾರದ ಸಾಮಾಜಿಕ ಜಾಲತಾಣಗಳಿಂದ ಬಿಡುಗಡೆ ಮಾಡುವ ಮಾಹಿತಿ ಮಾತ್ರ ಅಧಿಕೃತ ಹಾಗೂ ಸತ್ಯ ಎಂದು ಸಚಿವ ಡಾ. ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೊದಲ ಡೋಸ್ ಪಡೆದ 28 ದಿನಗಳ ನಂತರ 2ನೇ ಡೋಸ್ ನೀಡಲಾಗುತ್ತದೆ. ಜನರು ಯಾವುದೇ ಆತಂಕವಿಲ್ಲದೆ ವಿಶ್ವಾಸದಿಂದ ಲಸಿಕೆ ಪಡೆಯಬಹುದು ಎಂದರು.

ರಾಜ್ಯದಲ್ಲಿ 10 ವಾಕ್-ಇನ್ ಕೂಲರ್, 4 ವಾಕ್-ಇನ್ ಫ್ರೀಜರ್, 3,210 ಐಎಲ್ ಆರ್, 3,312 ಕೋಲ್ಡ್ ಬಾಕ್ಸ್, 46,591 ಲಸಿಕೆ ಕ್ಯಾರಿಯರ್, 2,25,749 ಐಸ್ ಪ್ಯಾಕ್ ಇದೆ ಎಂದು ಸಚಿವರು ಮಾಹಿತಿ ನೀಡಿದರು.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp