ಕೊರೋನಾ ನಿಗ್ರಹದಲ್ಲಿ ರಾಜ್ಯ ಸರ್ಕಾರಕ್ಕೆ ಶಹಬ್ಬಾಸ್ ಗಿರಿ: ಸಿಎಂ ಬಿಎಸ್‌ವೈ ನಾಯಕತ್ವಕ್ಕೆ ಜೈ ಎಂದ ಅಮಿತ್ ಶಾ

ಸಚಿವ ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಅಸಮಾಧಾನ, ನಾಯಕತ್ವದ ಬಗೆಗಿನ ಅಪಸ್ವರದ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

Published: 17th January 2021 08:55 PM  |   Last Updated: 17th January 2021 08:55 PM   |  A+A-


Amit Shah-BS Yediyurappa

ಅಮಿತ್ ಶಾ-ಬಿಎಸ್ ಯಡಿಯೂರಪ್ಪ

Posted By : Vishwanath S
Source : UNI

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಅಸಮಾಧಾನ, ನಾಯಕತ್ವದ ಬಗೆಗಿನ ಅಪಸ್ವರದ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರದಂತೆ ರಾಜ್ಯದಲ್ಲಿ ಯಡಿಯೂರಪ್ಪ ಆಡಳಿತ ಕೂಡ ಜನಪರವಾಗಿದೆ. ಕೋವಿಡ್ -19 ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳಿದರು.

ಈ ಮೂಲಕ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದವರಿಗೆ ಅಮಿತ್ ಶಾ ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಈ ಕಾರಣಕ್ಕೆ ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮರಣ ಪ್ರಮಾಣ ನಿಯಂತ್ರಣ ಸಾಧ್ಯವಾಗಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಕೂಡ ಕೋವಿಡ್-19 ವಿರುದ್ಧ ಸಮರ್ಥವಾಗಿ ಹೋರಾಟ ನಡೆಸುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿದೆ ಎಂದು ಎಂದರು.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಮುಂಬರುವ ದಿನಗಳಲ್ಲಿ ಎದುರಾಗಲಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಬೇಕು. ಇದಕ್ಕೆ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು, ಶೇ 75ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲುವ ಸಾಧಿಸಬೇಕು ಎಂದು ಕರೆ ನೀಡಿದರು.

ಕೋವಿಡ್ ಲಸಿಕೆ ವಿಚಾರದಲ್ಲಿ ಜನತೆ ಅಪಪ್ರಚಾರಕ್ಕೆ ಕಿವಿಗೊಡಬಾರದು. ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೇ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಂಡು ಕೊರೊನಾಮುಕ್ತ ಭಾರತಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

ಕರ್ನಾಟಕದ ಇತಿಹಾಸ ಇಡೀ ಭಾರತಕ್ಕೆ ಪ್ರೇರಣಾಶಾಲಿಯಾಗಿದೆ ಎಂದು ಹೇಳಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಬೆಳವಡಿ ಮಲ್ಲಮ್ಮನ ಶೌರ್ಯಗಾಥೆ ನೆನಪಿಸಿಕೊಂಡರು. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನವರ ದೇಶಪ್ರೇಮವನ್ನು ಕೊಂಡಾಡಿದ ಅವರು, ದೇಶಕ್ಕಾಗಿ ಬಲಿದಾನಗೈದವರು ಸದಾ ಸ್ಮರಣೀಯ ಎಂದರು.

ದಿ.ಸುರೇಶ್ ಅಂಗಡಿ ಅವರ ಅಕಾಲಿಕ ಸಾವಿನಿಂದಾಗಿ ಪಕ್ಷ ಮತ್ತು ರಾಜ್ಯಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಅಮಿತ್ ಶಾ ಬೇಸರ ವ್ಯಕ್ತಪಡಿಸಿದರು. ಕನ್ನಡ-ಮರಾಠಿ ಸಮ್ಮಿಳಿತ ಸಂಸ್ಕೃತಿಯ ಮುಂಬೈ ಕರ್ನಾಟಕ ಪ್ರದೇಶವು ಭಾರತದ ವೈವಿಧ್ಯತೆಗೆ ಸಾಕ್ಷಿಯಾಗಿದೆ ಎಂದರು.

ಗ್ರಾಮ ಪಂಚಾಯ್ತಿಯ ಒಟ್ಟು ಸದಸ್ಯರಲ್ಲಿ ಶೇ.55 ಕ್ಕೂ ಅಧಿಕ ಸದಸ್ಯರು ಪಕ್ಷದ ಕಾರ್ಯಕರ್ತರಾಗಿದ್ದಾರೆ. ರಾಜ್ಯದ ಜನರು ಎಲ್ಲ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈಬಲಪಡಿಸಿದ್ದೀರಿ ಎಂದರು.

ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯ ಮೂಲಕ ಬಡಜನರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬದ್ಧತೆ ತೋರಿಸಿದೆ. 2022 ರ ವೇಳೆಗೆ ದೇಶದ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಪ್ರತಿಯೊಬ್ಬರು ದೇಶಿಯ ಉತ್ಪನ್ನಗಳ ಬಳಕೆ ಮಾಡಿದರೆ ದೇಶದ ಜಿಡಿಪಿ ತನ್ನಿಂದ ತಾನೇ ಹೆಚ್ಚಾಗಲಿದೆ ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆತ್ಮನಿರ್ಭರ್ ಯೋಜನೆಯ ಬಗ್ಗೆ ವಿವರಿಸಿದರು. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ಆರಂಭಗೊಳ್ಳಲಿರುವುದರಿಂದ ಮುಂಬರುವ ದಿನಗಳಲ್ಲಿ ಚೈನಾದಿಂದ ಆಟಿಕೆ ಆಮದು ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಸಚಿವರಾದ ಲಕ್ಷ್ಮಣ ಸವದಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಜೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ನೂತನ ಸಚಿವರಾದ ಉಮೇಶ್ ಕತ್ತಿ ಮತ್ತಿತರರು ಮಾತನಾಡಿದರು.

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp