
ಸಾಂಕೇತಿಕ ಚಿತ್ರ
ಬೆಂಗಳೂರು: ಆಸ್ತಿ ವಿವಾದದಲ್ಲಿ ವ್ಯಕ್ತಿಯೋರ್ವ ತನ್ನ ತಾಯಿ, ತಮ್ಮನ ಪತ್ನಿ ಹಾಗೂ 3 ವರ್ಷದ ಮಗುವಿಗೆ ಚೂರಿ ಇರಿದ ಘಟನೆ ಮಡಿವಾಳದಲ್ಲಿ ನಡೆದಿದೆ.
ಮಡಿವಾಳದ ಡಾಲರ್ಸ್ ಕಾಲೋನಿಯ ನಿವಾಸಿ ಗೋಪಾಲಕೃಷ್ಣ (36) ಕ್ಯಾಬ್ ಡ್ರೈವರ್ ಸೂಪರ್ ಮಾರ್ಕೆಟ್ ನಿಂದ ಚೂರಿಯನ್ನು ಖರೀದಿಸುತ್ತಿದ್ದ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.
ಬೆಳಿಗ್ಗೆ 8:30 ಕ್ಕೆ ಈ ಘಟನೆ ನಡೆದಿದ್ದು, ಆಸ್ತಿ ಮಾರಾಟ ಮಾಡುವ ಸಂಬಂಧ ಗೋಪಾಲಕೃಷ್ಣ ತನ್ನ ತಾಯಿಯೊಂದಿಗೆ ವಾಗ್ವಾದ ನಡೆಸಿದಾಗ ಈ ಕೊಲೆ ಪ್ರಯತ್ನ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗೋಪಾಲಕೃಷ್ಣನಿಗೆ ಓರ್ವ ತಮ್ಮನಿದ್ದು, ಪಿತ್ರಾರ್ಜಿತ ಆಸ್ತಿ ಮಾರಾಟಮಾಡುವ ಸಂಬಂಧ ತನಗೆ ಬೆಂಬಲ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ತಾಯಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ತಾಯಿ ಗುಣಮ್ಮ (60), ತಮ್ಮನ ಪತ್ನಿ ಗಿರಿಜ(26) ಹಾಗೂ ಆಕೆಯ 3 ವರ್ಷದ ಮಗುವಿಕೆ ಚೂರಿಯಿಂದ ಇರಿದಿದ್ದಾನೆ.
ಚೂರಿಯಿಂದ ಇರಿದು, ಪರಾರಿಯಾಗುತ್ತಿದ್ದಾಗ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.