ಜೈಲಿನಿಂದ ಬಿಡುಗಡೆಯಾಗುವ ಕೆಲವೇ ದಿನಗಳ ಮುನ್ನ ಶಶಿಕಲಾ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಅವರು ಸೆರೆವಾಸ ಮುಗಿಸಿ ಜನವರಿ 27ಕ್ಕೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
Published: 20th January 2021 06:54 PM | Last Updated: 20th January 2021 06:54 PM | A+A A-

ಶಶಿಕಲಾ
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಅವರು ಸೆರೆವಾಸ ಮುಗಿಸಿ ಜನವರಿ 27ಕ್ಕೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಆರೋಗ್ಯದಲ್ಲಿ ಏರುಪೇರಾಗಿದ್ದು, ಬುಧವಾರ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ಎದೆ ನೋವು, ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲುತ್ತಿರುವ ಶಶಿಕಲಾ ಅವರನ್ನು ಜೈಲು ವೈದ್ಯಾಧಿಕಾರಿಗಳ ಸಲಹೆ ಮೆರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಶಿಕಲಾ ಅವರನ್ನು ಇಂದು ಮಧ್ಯಾಹ್ನ ಜೈಲಿನಿಂದ ಶಿವಾಜಿನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋವಿಡ್-19 ಪರೀಕ್ಷೆ ಸೇರಿದಂತೆ ಅವರಿಗೆ ಕೆಲವು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ನಾಲ್ಕು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಅವರು ಜನವರಿ 27ರಂದು ಬಿಡುಗಡೆಯಾಗುವ ಸಾಧ್ಯತೆ ಇದ್ದು, ಕೆಲವೇ ತಿಂಗಳಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಿರುವ ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.