ಅಜೀಂ ಪ್ರೇಮ್ಜಿ ಮತ್ತು ಪತ್ನಿ ವಿರುದ್ಧದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿದ್ದ ಅರ್ಜಿ ವಜಾ
ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯಡಿ ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜೀಂ ಪ್ರೇಮ್ಜಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
Published: 21st January 2021 09:46 AM | Last Updated: 21st January 2021 12:53 PM | A+A A-

ಅಜೀಂ ಪ್ರೇಮ್ ಜಿ
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯಡಿ ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜೀಂ ಪ್ರೇಮ್ಜಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ 'ಇಂಡಿಯಾ ಅವೇಕ್ ಫಾರ್ ಟ್ರಾನ್ಸ್ಪರೆನ್ಸಿ' ಎಂಬ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಇಂಡಿಯಾ ಅವೇಕ್ ಫಾರ್ ಟ್ರಾನ್ಸ್ಪರೆನ್ಸಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ಆದೇಶ ನೀಡಿದ್ದಾರೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ನ್ಯಾಯಪೀಠ, ಉದ್ಯಮಿ ಅಜೀಂ ಪ್ರೇಮ್ಜಿ, ಅವರ ಪತ್ನಿ ಯಾಸ್ಮಿನ್ ಎ ಪ್ರೇಮ್ಜಿ ಮತ್ತು ಪಿ.ವಿ. ಶ್ರೀನಿವಾಸನ್ ವಿರುದ್ಧ ದಾಖಲಿಸಲಾಗಿದ್ದ ಎರಡು ಖಾಸಗಿ ದೂರುಗಳನ್ನು ರದ್ದುಗೊಳಿಸಿದೆ. ಅಜೀಂ ಪ್ರೇಮ್ಜಿ ಅವರು ತಮ್ಮ ಒಡೆತನಕ್ಕೆ ಸೇರಿದ ವಿವಿಧ ಕಂಪೆನಿಗಳನ್ನು ಒಂದೇ ಕಂಪೆನಿ ವ್ಯಾಪ್ತಿಗೆ ತಂದಿದ್ದರು.
ಇದು ಕಾನೂನು ಬಾಹಿರ. ಈ ಕಂಪೆನಿಗಳ ಆಸ್ತಿ ಸರ್ಕಾರಕ್ಕೆ ಸೇರಬೇಕು. ಅವರ ವಿರುದ್ಧ ಕಂಪೆನಿ ಕಾಯ್ದೆ 2013ರ ಅಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಚೆನ್ನೈ ಮೂಲದ ಸಂಸ್ಥೆ ದೂರು ದಾಖಲು ಮಾಡಿತ್ತು. ಆರ್ಬಿಐ ಕಾಯಿದೆ ಸೆಕ್ಷನ್ 451 ಎ ಪ್ರಕಾರ ನೋಂದಣಿ ಮಾಡಿಸದೆ ಬ್ಯಾಂಕಿಂಗೇತರ ಹಣಕಾಸು ವಹಿವಾಟು (ಎನ್ಬಿಎಫ್ಸಿ)ನಡೆಸುವಂತಿಲ್ಲ.
ಆದರೆ, ಅಜೀಂ ಪ್ರೇಮ್ ಜಿ ಸೇರಿದಂತೆ ಕಂಪನಿಯ ಹಲವು ನಿರ್ದೇಶಕರು ಅನಧಿಕೃತವಾಗಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತೆ ಕೋರಿ ಅರ್ಜಿದಾರರು ಆರ್ಬಿಐಗೆ ದೂರು ನೀಡಿದ್ದರು.
ಮೂರು ಕಂಪೆನಿಗಳಿಗೆ ಅಜೀಂ ಪ್ರೇಮ್ಜಿ ಮತ್ತು ಇನ್ನಿಬ್ಬರು ನಿರ್ದೇಶಕರಾಗಿದ್ದಾರೆ. ಎಲ್ಲ ಷೇರುಗಳು ಕೂಡ ಕಂಪೆನಿಯ ಮಾಲೀತ್ವದಲ್ಲಿಯೇ ಇದೆ. ಈ ಮಧ್ಯೆ ಮೂರು ಕಂಪೆನಿಗಳ ಆಸ್ತಿಯನ್ನು ಪ್ರೇಮ್ಜಿ ದಂಪತಿ ಒಡೆತನದ ಟ್ರಸ್ಟ್ಗೆ ವರ್ಗಾವಣೆ ಮಾಡಲಾಗಿದೆ. ಒಂದು ವೇಳೆ ಕಂಪೆನಿಗಳು ಸಂಕಷ್ಟಕ್ಕೆ ಸಿಲುಕಿದರೆ ಸಂಪೂರ್ಣ ಸ್ವತ್ತನ್ನು ಸರ್ಕಾರವು ವಶಕ್ಕೆ ಪಡೆದುಕೊಳ್ಳಬಹುದಾಗಿತ್ತು. ಆದರೆ ಅಜೀಂ ಪ್ರೇಮ್ಜಿ ಅವರ ನಡೆಯಿಂದ ಅದಕ್ಕೆ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಲಾಗಿತ್ತು
ದೂರಿಗೆ ಆರ್ಬಿಐ ಉತ್ತರ ನೀಡಿದ್ದರೂ ಅರ್ಜಿದಾರರು ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅದು 2020ರ ಜು.28ರಂದು ವಜಾಗೊಂಡ ಕಾರಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿದಾರರು ಮಾಡಿದ್ದ ದೂರಿಗೆ ಆರ್ಬಿಐ 2017ರ ಸೆ.5ರಂದು ಸಮಗ್ರ ಉತ್ತರ ನೀಡಿದೆ.
ಆದರೂ ಅರ್ಜಿಯನ್ನು ಸಲ್ಲಿಸಿ ನ್ಯಾಯಾಂಗವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅರ್ಜಿದಾರರಿಗೆ ಏನೇ ತಕರಾರು ಇದ್ದರೆ ಅವರು ಸೂಕ್ತ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಅದು ಬಿಟ್ಟು ಮ್ಯಾಜಿಸ್ಪ್ರೇಟ್ ಕೋರ್ಟ್ನಲ್ಲಿ ಖಾಸಗಿ ದೂರು ಸಲ್ಲಿಸುವುದು ಅಥವಾ ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು.