ಶಿವಮೊಗ್ಗ ಸ್ಫೋಟ ಪ್ರಕರಣಕ್ಕೂ ರೈಲ್ವೇ ಇಲಾಖೆಗೂ ಸಂಬಂಧವಿಲ್ಲ: ಅಧಿಕಾರಿಗಳ ಸ್ಪಷ್ಟನೆ
ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಶಿವಮೊಗ್ಗ ಸ್ಫೋಟ ಪ್ರಕರಣಕ್ಕೂ ರೈಲ್ವೇ ಇಲಾಖೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Published: 22nd January 2021 03:07 PM | Last Updated: 22nd January 2021 03:07 PM | A+A A-

ರೈಲ್ವೇ ಇಲಾಖೆ
ಶಿವಮೊಗ್ಗ: ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಶಿವಮೊಗ್ಗ ಸ್ಫೋಟ ಪ್ರಕರಣಕ್ಕೂ ರೈಲ್ವೇ ಇಲಾಖೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿನ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಹಲವು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಹಲವು ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸದ್ದು ಮಾಡುತ್ತಿವೆ.
ಈ ನಡುವೆ ಕೆಲ ಮಾಧ್ಯಮಗಳು ಪ್ರಕರಣದಲ್ಲಿ ರೈಲ್ವೇ ಇಲಾಖೆಯ ಪಾತ್ರದ ಕುರಿತು ಸುದ್ದಿ ಮಾಡುತ್ತಿದ್ದು, ಕಲ್ಲು ಕ್ವಾರಿಯಿಂದ ರೈಲ್ವೇ ಇಲಾಖೆ ಜಲ್ಲಿ ಕಲ್ಲುಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಇಲಾಖೆ ಸ್ಥಳೀಯ ರೈಲ್ವೇ ಯೋಜನೆಗಳಿಗೆ ಇದನ್ನು ಬಳಸಿಕೊಳ್ಳುತ್ತಿತ್ತು ಎಂದು ಹೇಳಲಾಗಿತ್ತು.
ಆದರೆ ಇದೀಗ ಈ ಊಹಾಪೋಹಗಳಿಗೆ ತೆರೆ ಎಳೆದಿರುವ ರೈಲ್ವೇ ಇಲಾಖೆ, ಶಿವಮೊಗ್ಗ ಸ್ಫೋಟ ಪ್ರಕರಣಕ್ಕೂ ರೈಲ್ವೇ ಇಲಾಖೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕೆಲ ಮಾಧ್ಯಮಗಳಲ್ಲಿ ಇಲಾಖೆಯ ಕುರಿತು ಸುಳ್ಳು ಸುದ್ದಿಗಳು ಪ್ರಕಟವಾಗುತ್ತಿದೆ. ಇದು ಸತ್ಯಕ್ಕೆ ದೂರವಾದದ್ದು. ಇಂತಹ ವರದಿಗಳು ಇಲಾಖೆಯ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದೆ.
ಅಂತೆಯೇ ಆ ಪ್ರದೇಶದಲ್ಲಿ ರೈಲ್ವೇ ಇಲಾಖೆ ಯಾವುದೇ ರೀತಿಯ ಜಲ್ಲಿಕಲ್ಲುಗಳನ್ನು ಸ್ವೀಕರಿಸುತ್ತಿಲ್ಲ ಎಂದೂ ಸ್ಪಷ್ಟಪಡಿಸಿದೆ.