ಶಿವಮೊಗ್ಗ ಸ್ಫೋಟಕ್ಕೆ ಕಾರಣದ ಬಗ್ಗೆ ಪರಿಶೀಲನೆ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರ ಮೇಲೆ ಕ್ರಮ: ಸಚಿವ ಈಶ್ವರಪ್ಪ
ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಗಣಿಗಾರಿಕೆ ಪ್ರದೇಶದಲ್ಲಿ ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟ ಘಟನೆ ಬಗ್ಗೆ ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದು, ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
Published: 22nd January 2021 10:14 AM | Last Updated: 22nd January 2021 01:01 PM | A+A A-

ಕೆ ಎಸ್ ಈಶ್ವರಪ್ಪ
ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಗಣಿಗಾರಿಕೆ ಪ್ರದೇಶದಲ್ಲಿ ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟ ಘಟನೆ ಬಗ್ಗೆ ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದು, ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಅವರು ಇಂದು ಬೆಳಗ್ಗೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಶಿವಮೊಗ್ಗ ಗ್ರಾಮಾಂತರ ತಾಲ್ಲೂಕಿನ ಅಬ್ಬಗೆರೆ ಗ್ರಾಮದಲ್ಲಿ ರಾತ್ರಿ ನಡೆದ ಭೀಕರ ಸ್ಪೋಟದ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಸಂಪೂರ್ಣ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ತಪ್ಪಿತಸ್ಥರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇಂದಿನ ಘಟನೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಆಗಿದೆ, ಸ್ಫೋಟಕ್ಕೆ ಕಾರಣಗಳೇನು ಎನ್ನುವುದು ಇನ್ನೂ ಸ್ಪಷ್ಟತೆ ಆಗಬೇಕಿದೆ. ಗಿಲೆಟನ್ ಎಷ್ಟರ ಮಟ್ಟಿಗೆ ಅಲ್ಲಿದ್ದವು, ಕೇಪ್ ಎಷ್ಟಿದ್ದವು ಎಂಬುದರ ಬಗ್ಗೆ ತಜ್ಞರು ಆಗಮಿಸಿ ನೋಡಿ ಮಾದರಿ ತೆಗೆದುಕೊಂಡು ಹೋಗಿ ವರದಿ ನೀಡಬೇಕಿದೆ. ಇಷ್ಟರ ಮಟ್ಟಿಗೆ ಸ್ಫೋಟ ಹೇಗಾಯಿತು ಎಂಬುದನ್ನು ಪರಿಶೀಲಿಸಬೇಕಿದೆ. ಈ ಸ್ಫೋಟ ಶಿವಮೊಗ್ಗದಿಂದ ತೀರ್ಥಹಳ್ಳಿ, ಸಾಗರ, ಚಿಕ್ಕಮಗಳೂರಿನ ಶೃಂಗೇರಿ ತಾಲ್ಲೂಕಿನವರೆಗೆ ಶಬ್ಧವಾಗಿದೆ ಎಂಬ ಸುದ್ದಿಯಿದೆ. ಇಷ್ಟೊಂದು ಪ್ರಬಲವಾಗಿ ಹೇಗಾಯಿತು ಎಂದು ತಿಳಿಯಬೇಕಿದೆ ಎಂದರು.
ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದರೆ ಅದು ಯಾರೇ ಆದರೂ, ಎಷ್ಟೇ ಪ್ರಭಾವಿಗಳಾದರೂ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿಯವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ನೀಡಿದ್ದಾರೆ.