ಕನ್ನಡ ಧ್ವಜ ವಿವಾದ: ಗಡಿಯಲ್ಲೇ ಶಿವಸೇನೆ ಪುಂಡರ ತಡೆದ ಪೊಲೀಸರು
ಬೆಳಗಾವಿ ಗಡಿ, ಕನ್ನಡ ಧ್ವಜ ವಿಚಾರವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತ ಬಂದಿರುವ ನಾಡದ್ರೋಹಿ ಶಿವಸೇನೆ ಪುಂಡರು ಗುರುವಾರ ಬೆಳಗಾವಿ ಗಡಿಯೊಳಗೆ ನುಸುಳಲು ಯತ್ನಿಸಿ, ಹತಾಶರಾಗಿ ಕರ್ನಾಟಕ ಪೊಲೀಸರ ಮೇಲೆಯೇ ದರ್ಪ ತೋರಿಸಿ ಪುಂಡಾಟಿಕೆ ಮೆರೆದ ಘಟನೆ ನಡೆಯಿತು.
Published: 22nd January 2021 07:39 AM | Last Updated: 22nd January 2021 07:39 AM | A+A A-

ಸಾಂದರ್ಭಿಕ ಚಿತ್ರ
ಬೆಳಗಾವಿ: ಬೆಳಗಾವಿ ಗಡಿ, ಕನ್ನಡ ಧ್ವಜ ವಿಚಾರವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತ ಬಂದಿರುವ ನಾಡದ್ರೋಹಿ ಶಿವಸೇನೆ ಪುಂಡರು ಗುರುವಾರ ಬೆಳಗಾವಿ ಗಡಿಯೊಳಗೆ ನುಸುಳಲು ಯತ್ನಿಸಿ, ಹತಾಶರಾಗಿ ಕರ್ನಾಟಕ ಪೊಲೀಸರ ಮೇಲೆಯೇ ದರ್ಪ ತೋರಿಸಿ ಪುಂಡಾಟಿಕೆ ಮೆರೆದ ಘಟನೆ ನಡೆಯಿತು.
ಮಹಾರಾಷ್ಟ್ರದ ಗಡಿಯಲ್ಲಿರುವ ಶನೋಳಿ ಗ್ರಾಮದ ಚೆಕ್ ಪೋಸ್ಟ್ ಬಳಿಯೇ ಕರ್ನಾಟಕ ಪೊಲೀಸರು ಶಿವಸೇನೆ ಪುಂಡರನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಶಿವಸೇನೆ ಪುಂಡರು ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಲ್ಲದೇ, ನೂಕಾಟ, ತಳ್ಫಾಟ ಮಾಡಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಹಾರಿಸಲಾಗಿರುವ ಕನ್ನಡ ಧ್ವಜ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾವೇ ತೆರಳಿ ಕನ್ನಡ ಧ್ವಜ ತೆರವುಗೊಳಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ಕನ್ನಡಿಗರು, ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಪೊಲೀಸರನ್ನು ಏಕ ವಚನದಲ್ಲಿಯೇ ನಿಂದಿಸಿದ್ದಾರೆ.
ಕರ್ನಾಟಕ ಪೊಲೀಸರ ಮೇಲೆ ಶಿವಸೇನೆ ಪುಂಡರು ದರ್ಪ ತೋರುತ್ತಿದ್ದರೂ ಮಹಾರಾಷ್ಟ್ರ ಪೊಲೀಸರು ಸುಮ್ಮನೆ ನಿಂತಿರುವುದು ಕಂಡು ಬಂದಿತು.ಬೆಳಗಾವಿ ಗ್ರಾಮೀಣ ಎಸಿಪಿ ಗಣಪತಿ ಗುಜಾಜ್ ಅವರನ್ನು ಶಿವಸೇನೆ ಪುಂಡರು ನೂಕಿದರು. ಕರ್ನಾಟಕ ಗಡಿಯೊಳಗೆ ಪ್ರವೇಶಿಸಿದರೆ ಲಾಠಿ ಚಾರ್ಜ್ ಮಾಡುವುದಾಗಿ ಪೊಲೀಸರು ಎಚ್ಚರಿಕೆ ನೀಡಿದರು. ಈ ವೇಳೆ ಯಾರಪ್ಪಂದು ಅಲ್ಲ, ಬೆಳಗಾವಿ ನಮ್ಮದು ಎಂದು ಮರಾಠಿ ಭಾಷೆಯಲ್ಲೇ ಘೋಷಣೆ ಕೂಗಿದ್ದಾರೆ.
ಕರ್ನಾಟಕ ಸರ್ಕಾರ, ಕನ್ನಡಿಗರ ವಿರುದ್ಧ ಘೋಷಣೆ ಕೂಗಿದ ಪುಂಡರು ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿದಂತೆ ಮತ್ತಿತರ ಮರಾಠಿ ಬಹುಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ಘೋಷಣೆ ಕೂಗಿದರು. ಬಾಜಾ, ಭಜಂತ್ರಿ ಸಮೇತರಾಗಿ ಗಡಿ ಮೂಲಕ ಕರ್ನಾಟಕಕ್ಕೆ ನುಸುಳಲು ಯತ್ನಿಸಿದ ಶಿವಸೇನೆ ಪುಂಡರಿಗೆ ಕರ್ನಾಟಕ ಪೊಲೀಸರು ತಕ್ಕ ಶಾಸ್ತಿ ನೀಡಿದರು. ಈ ವೇಳೆ ಗಡಿ ಪ್ರವೇಶಕ್ಕೆ ಯತ್ನಿಸಿ, ಸೋತು ಸುಣ್ಣರಾದ ಶಿವಸೇನೆ ಪುಂಡರು ಧರಣಿ ಸತ್ಯಾಗ್ರಹ ನಡೆಸಿದರು.
ಕನ್ನಡ ಧ್ವಜದ ವಿಚಾರವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿತ್ತು. ಆದರೆ, ಮುಂಜಾಗ್ರತಾ ಕ್ರಮವಾಗಿ ನಗರದ ಶಾಂತಿ, ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಈ ರ್ಯಾಲಿಗೆ ಪೊಲೀಸರು ಅನುಮತಿ ನೀಡಲಿಲ್ಲ. ಆಧರೆ, ಶಿವಸೇನೆ ಕಾರ್ಯಕರ್ತರು ಗಡಿಯೊಳಗೆ ನುಗ್ಗಿ ಶಾಂತಿ, ಸುವ್ಯವಸ್ಥೆ ಕದಡಲು ಯತ್ನಿಸಿದರು. ಶಿವಸೇನೆ, ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವನೆ, ಸಂತೋಷ ಮಳವಿಕರ, ಪ್ರಭಾಕರ ಖಾಂಡೆಕರ, ಸಂಜೋತಿ ಮಾಳವಿಕರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.