
ಸಾಂದರ್ಭಿಕ ಚಿತ್ರ
ಮಂಗಳೂರು: ಮೊದಲ ವರ್ಷದ ವಿದ್ಯಾರ್ಥಿಗಳನ್ನು ರ್ಯಾಗ್ ಮಾಡಿದ ಆರೋಪದ ಮೇಲೆ ಮಂಗಳೂರಿನ ಖಾಸಗಿ ಕಾಲೇಜೊಂದರ ಎಂಟು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ವಿದ್ಯಾರ್ಥಿಗಳ ವಿರುದ್ಧ ಮೊದಲ ವರ್ಷದ ಬಿಫಾರ್ಮಾ ವಿದ್ಯಾರ್ಥಿಗೆ ತನ್ನ ತಲೆ ಹಾಗೂ ಮೀಸೆ ಬೋಳಿಸುವಂತೆ ಒತ್ತಡ ಹೇರಿದ ಆರೋಪ ಹೊರಿಸಲಾಗಿದೆ. ಅದಕ್ಕೆ ಆ ವಿದ್ಯಾರ್ಥಿ ಒಪ್ಪದಿದ್ದುದರಿಂದ ಆತನನ್ನು ಐದು ದಿನಗಳವರೆಗೆ ಸತತವಾಗಿ ರ್ಯಾಗ್ ಮಾಡಲಾಗಿದೆ.
ಬಂಧಿತರನ್ನು ಜಿಶ್ನು (20), ಶ್ರೀಕಾಂತ್ (20), ಅಶ್ವತ್(20), ಸೈನಾಥ್ (22), ಅಭಿರತ್ ರಾಜೀವ್ (21), ರಾಹುಲ್ (21), ಮುಕ್ತಾರ್ ಅಲಿ (19) ಮತ್ತು ಮೊಹಮ್ಮದ್ ರಜೀನ್ (20) ಎಂದು ಗುರುತಿಸಲಾಗಿದೆ. ಆರೋಪಿಗಳು ಮತ್ತು ಸಂತ್ರಸ್ತ ಇಬ್ಬರೂ ಕೇರಳ ಮೂಲದವರು.
ರ್ಯಾಗಿಂಗ್ಗೆ ಸಂಬಂಧಿಸಿದ ದೂರನ್ನು ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಶುಕ್ರವಾರ ಬಂಧನಕ್ಕೊಳಗಾದ ಆರೋಪಿಗಳ ಮೇಲೆ ಐಪಿಸಿ ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.