ಶಿವಮೊಗ್ಗ ಹುಣಸೋಡು ಸ್ಫೋಟ: ಕಾರಣ ಇನ್ನೂ ನಿಗೂಢ, ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ

ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ನಿಖರ ಕಾರಣ ಇನ್ನೂ ನಿಗೂಢವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಆತಂಕ ಎದುರಾಗಿದೆ.

Published: 22nd January 2021 01:18 PM  |   Last Updated: 22nd January 2021 01:22 PM   |  A+A-


Shivamogga explosion

ಹುಣಸೋಡು ಕಲ್ಲುಕ್ವಾರಿಯಲ್ಲಿ ಸ್ಫೋಟ

Posted By : Srinivasamurthy VN
Source : The New Indian Express

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ನಿಖರ ಕಾರಣ ಇನ್ನೂ ನಿಗೂಢವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಆತಂಕ ಎದುರಾಗಿದೆ.

ಸ್ಥಳದಲ್ಲಿ ಸಂಭವಿಸಿದ ಸ್ಫೋಟ ಅವಘಡದಲ್ಲಿ 8ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸ್ಫೋಟದ ಸಂದರ್ಭದಲ್ಲಿ ಘಟನಾ ಪ್ರದೇಶದಲ್ಲಿ ಎಷ್ಟು ಮಂದಿ ಇದ್ದರು. ಸ್ಫೋಟಗೊಂಡ ಲಾರಿಯಲ್ಲಿ ಜಿಲೆಟಿನ್ ಕಡ್ಡಿಗಳು ಮಾತ್ರವಲ್ಲದೇ ಡೈನಾಮೈಟ್ ಗಳೂ ಕೂಡ ಇದ್ದವು ಎಂಬ ಶಂಕೆ ಇದ್ದು, ಈ ಪೈಕಿ ಎಷ್ಟು ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ ಮತ್ತು ಇನ್ನೂ ಎಷ್ಟು ಜಿಲೆಟಿನ್ ಕಡ್ಡಿಗಳು ಮತ್ತು ಡೈನಾಮೈಟ್ ಗಳು ಜೀವಂತವಾಗಿವೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಆತಂಕ ಎದುರಾಗಿದೆ.

ಇದೇ ಕಾರಣಕ್ಕೆ ಪೊಲೀಸರು ಘಟನಾ ಪ್ರದೇಶವನ್ನು ಸುತ್ತುವರೆದಿದ್ದು, ಸ್ಥಳಕ್ಕೆ ತಜ್ಞರು ಅಧಿಕಾರಿಗಳನ್ನು ಬಿಟ್ಟು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಘಟನಾ ಸ್ಥಳಕ್ಕೆ ಯಾರೂ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಸುತ್ತಲೂ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಯಾರನ್ನೂ ಒಳಗೆ ಬಿಡುತ್ತಿಲ್ಲ. ಭಾರಿ ಪ್ರಮಾಣದ ಸ್ಫೋಟಕ ತಂದಿರುವ ಹಿನ್ನೆಲೆಯಲ್ಲಿ, ಅವೆಲ್ಲವು ರಾತ್ರಿಯೇ ಸ್ಫೋಟಗೊಂಡಿರಬಹುದು. ಒಂದು ವೇಳೆ ಕೆಲವು ಸ್ಫೋಟಕಗಳು ಸಜೀವ ಸ್ಥಿತಿಯಲ್ಲಿದ್ದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ.

ಅಂತೆಯೇ ಘಟನಾ ಸ್ಥಳಕ್ಕೆ ತಜ್ಞರ ತಂಡ ದೌಡಾಯಿಸಿದ್ದು, ಚಿತ್ರದುರ್ಗ, ದಾವಣಗೆರೆಯಿಂದ ಎಎಸ್'ಸಿ ವಿಶೇಷ ತಂಡ ಹಾಗೂ ಶ್ವಾನದಳಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿವೆ. ಅಂತೆಯೇ ಬೆಂಗಳೂರು ಮತ್ತು ಮಂಗಳೂರಿನಿಂದ ಬಾಂಬ್‌ ನಿಷ್ಕ್ರಿಯ ದಳ ಆಗಮಿಸಿ, ತನಿಖೆ ಆರಂಭಿಸಿದೆ. ಪರಿಶೀಲನೆ ಬಳಿಕ, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಮೆಡಿಕಲ್ ಟೀಂ ಶೋಧ ಕಾರ್ಯ ನಡೆಸಲಾಗುತ್ತದೆ.

ಈ ನಡುವೆ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಇತರೆ ನಾಯಕರು ಭೇಟಿ ನೀಡಿ‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮಕೈಗೊಳ್ಳುತ್ತೇವೆ, ಈ ಘಟನೆ ದೊಡ್ಡ ಅಚಾತುರ್ಯ. ಕಾರಣರಾದವರನ್ನು ಹುಡುಕಿ ಕಾನೂನಿನ ಮುಂದೆ ತರಲಾಗುವುದು ನಾಳೆ ತಾವು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಮೂವರ ಬಂಧನ
ಘಟನೆಗೆ ಸಂಬಂಧಿಸಿದಂತೆ ಪ್ರಸ್ತುತ ಕ್ವಾರಿ ಪ್ರದೇಶದ ಮೂಲ ಮಾಲೀಕ ಅವಿನಾಶ್, ಗುತ್ತಿಗೆದಾರ ಸುಧಾಕರ್, ಕಲ್ಲು ಗಣಿಗಾರಿಕೆಗೆ ಜಿಲೆಟಿನ್ ಪೂರೈಕೆ ಮಾಡುತ್ತಿದ್ದ ನರಸಿಂಹ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. 

8 ಮಂದಿ ಕಾರ್ಮಿಕರ ಸಾವು
ಇನ್ನು ದುರಂತದಲ್ಲಿ ಬಿಹಾರ ಮೂಲದ 8 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಮೃತರ ವಿವರ ಲಭ್ಯವಾಗಿಲ್ಲ. ಲಾರಿ ಚಾಲಕ, ಕಾರ್ಮಿಕರು ಸೇರಿದಂತೆ 8ಕ್ಕೂ ಹೆಚ್ಚು ಕಾರ್ಮಿಕರ ಮೃತದೇಹವೂ ಒಂದೊಂದು ದಿಕ್ಕಿನಲ್ಲಿ ಛಿದ್ರ ಛಿದ್ರವಾಗಿ ಬಿದ್ದಿವೆ. ಸ್ಫೋಟದ ತೀವ್ರತೆ ಹೇಗಿತ್ತು ಎಂದರೆ, ದುರಂತದಲ್ಲಿ ಮೃತಪಟ್ಟಿರೋ ಅದೆಷ್ಟೋ ಕಾರ್ಮಿಕರ ಮೃತದೇಹ ಗುರುತೇ ಸಿಗದಷ್ಟು ಛಿದ್ರ ಛಿದ್ರವಾಗಿದೆ. ಲಾರಿಯೊಂದಕ್ಕೆ ತುಂಬಿದ್ದ ಜೆಲಿಟಿನ್ ಸ್ಫೋಟಗೊಂಡು ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಲಾರಿಯಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳಲ್ಲಿ, ಬಹುತೇಕ ಜಿಲ್ಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಲಾರಿ ಛಿದ್ರ ಛಿದ್ರಗೊಂಡಿದೆ ಎಂದು ತಿಳಿದುಬಂದಿದೆ.

ಸಿಗರೇಟ್, ಬೀಡಿ ಸೇದುತ್ತಿದ್ದ ಕಾರ್ಮಿಕರು
ಇನ್ನು ದುರಂತಕ್ಕೆ ಕಾರ್ಮಿಕರ ಬೀಡಿ ಮತ್ತು ಸಿಗರೇಟ್ ಸೇವನೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯರು ನೀಡಿರುವ ಮಾಹಿತಿಯಂತೆ ಜಿಲೆಟಿನ್ ಕಡ್ಡಿಗಳು ಮತ್ತು ಇತರೆ ಸ್ಫೋಟಕಗಳು ತುಂಬಿದ್ದ ಲಾರಿ ಕ್ವಾರಿಯಲ್ಲಿದ್ದಾಗ, ಒಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೀಡಿ ಮತ್ತು ಸಿಗರೇಟ್ ಸೇದುತ್ತಿದ್ದರು. ಇದೇ ಅವಘಡಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ಉನ್ನತ ಮಟ್ಟದ ತನಿಖೆ, ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಅಧಿಕಾರಿಗಳಿಂದ ತಾವು ಪ್ರಕರಣದ ಪ್ರಾಥಮಿಕ ವರದಿ ತರಿಸಿಕೊಂಡಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದೇನೆ. ಅಂತೆಯೇ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ನಾಳೆ ಶಿವಮೊಗ್ಗಕ್ಕೆ ತೆರಳಿ ಘಟನಾ ಸ್ಥಳದಲ್ಲಿ ಖುದ್ದು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp