ಕಬ್ಬನ್ ಪಾರ್ಕ್ನಲ್ಲಿ ನಿಯಮಬಾಹಿರ ನಿರ್ಮಾಣ: ರಾಜ್ಯ ಸರ್ಕಾರಕ್ಕೆ 'ಹೈ' ನೋಟಿಸ್
ಕಬ್ಬನ್ ಪಾರ್ಕ್ ವ್ಯಾಪ್ತಿಯೊಳಗೆ ಕಾನೂನು ಬಾಹಿರವಾಗಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನೋಟಿಸ್ ನೀಡಿದೆ.
Published: 22nd January 2021 07:54 AM | Last Updated: 22nd January 2021 12:52 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕಬ್ಬನ್ ಪಾರ್ಕ್ ವ್ಯಾಪ್ತಿಯೊಳಗೆ ಕಾನೂನು ಬಾಹಿರವಾಗಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನೋಟಿಸ್ ನೀಡಿದೆ.
ಕಬ್ಬನ್ ಪಾರ್ಕ್ನಲ್ಲಿ ನಿಯಮಬಾಹಿರ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪದಡಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದಿಂದ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದೀಗ, ಈ ಕುರಿತು ಸರ್ಕಾರ ಮತ್ತು ತೋಟಗಾರಿಕೆ ಇಲಾಖೆಗೆ ಹೈಕೋರ್ಟ್ ನೋಟಿಸ್ ಕಳುಹಿಸಿದೆ.
ಹೈಕೋರ್ಟ್ ಅನುಮತಿ ಪಡೆಯದೇ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಸಂಘ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿದೆ. ಹಾಗಾಗಿ, ಅಕ್ರಮ ನಿರ್ಮಾಣಗಳಿಗೆ ತಡೆಯಾಜ್ಞೆ ನೀಡಲು ಸಂಘ ಮನವಿಮಾಡಿದೆ.
‘ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಜಲ ಮಂಡಳಿ, ಸೆಂಚುರಿ ಕ್ಲಬ್, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್, ಸಚಿವಾಲಯ ಕ್ಲಬ್, ದಿ ಪ್ರೆಸ್ ಕ್ಲಬ್ ಮತ್ತು ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್ನಿಂದ ಅಕ್ರಮವಾಗಿ ನಿರ್ಮಾಣ ಕಾಮಗಾರಿ ನಿರ್ವಹಿಸಲಾಗುತ್ತಿದೆ’ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಅರ್ಜಿ ಸಲ್ಲಿಸಿದೆ. ‘ಈ ಸಂಬಂಧ ಲೋಕಾಯುಕ್ತಕ್ಕೂ ಹಲವು ಬಾರಿ ದೂರು ಸಲ್ಲಿಸಲಾಗಿದೆ. ನಂತರವೂ ನಿರ್ಮಾಣ ಕಾಮಗಾರಿ ಮುಂದುವರಿದಿದೆ’ ಎಂದು ಆರೋಪಿಸಲಾಗಿದೆ.
‘2001ರ ಆಗಸ್ಟ್ 13ರಂದು ಹೈಕೋರ್ಟ್ ಹೊರಡಿಸಿರುವ ಆದೇಶದ ಪ್ರಕಾರ, ಯಾವುದೇ ನಿರ್ಮಾಣ ಕಾರ್ಯಕ್ಕೂ ನ್ಯಾಯಾಲಯದ ಅನುಮತಿ ಪಡೆಯಬೇಕು. ಆದರೆ, ಅನುಮತಿ ಇಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ. ಅಲ್ಲದೇ ಇದು ಕರ್ನಾಟಕ ಉದ್ಯಾನಗಳ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆ’ ಎಂದು ದೂರಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ, ತೋಟಗಾರಿಕೆ ಇಲಾಖೆಗೆ ಹೈಕೋರ್ಟ್ ನೋಟಿಸ್ ನೀಡಿದೆ.