
ಸಂಗ್ರಹ ಚಿತ್ರ
ಬೆಂಗಳೂರು: ಅಂತಾರಾಜ್ಯ ಕಳ್ಳನೋರ್ವನನ್ನು ಪೊಲೀಸರು ಬಂಧಿಸಿ, 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ಲುರ್ದುನಾದನ್ (62) ಬಂಧಿತ ಆರೋಪಿಯಾಗಿದ್ದು, ಈತನಿಂದ ಸುಮಾರು 7 ಲಕ್ಷ ರೂ. ಮೌಲ್ಯದ 130 ಗ್ರಾಂ ಚಿನ್ನಾಭರಣ ಮತ್ತು 1.5 ಕೆ.ಜಿ. ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದ್ದಾರೆ.
ಕಳೆದ ಮೇ. 23 ರಂದು ರಂಗಸ್ವಾಮಿ ಎಂಬುವವರು ದಾಸರಹಳ್ಳಿಯ ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ತಮ್ಮಮನೆ ಕಳವು ಆಗಿರುವ ಕುರಿತು ದೂರು ನೀಡಿದ್ದರು.
ಜ. 17ರಂದು ಸಂಜೆ 6-30 ಗಂಟೆ ಸುಮಾರಿಗೆ ಅಪರಾಧ ವಿಭಾಗದ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಬಾಗಲಗುಂಟೆ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಮೇಟ್ರೋ ಸ್ಟೇಷನ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಓರ್ವನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈತ ಕಳವು ಮಾಡಲು ಬಂದಿರುವುದಾಗಿ ಪೊಲೀಸರಿಗೆ ಸಾಬೀತಾಗಿದೆ.
ಆರೋಪಿ ಪ್ಲಂಬಿಂಗ್ ಕೆಲಸ ಮಾಡಿದ್ದು, ರಾತ್ರಿ ವೇಳೆಯಲ್ಲಿ ಕಬ್ಬಿಣದ ರಾಡಿನಿಂದ ಮನೆಯ ಬೀಗವನ್ನು ಮೀಟಿ ಕಳ್ಳತನ ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಬಂಧನದಿಂದ ಬಾಗಲಗುಂಟೆ ಪೊಲೀಸ್ ಠಾಣೆ -3 ಹಗಲು ಮತ್ತು ರಾತ್ರಿ ಕನ್ನಾ ಕಳವು ಪ್ರಕರಣಗಳು ಮತ್ತು ಬಾಗಲಗುಂಟೆ ಪೊಲೀಸ್ ಠಾಣೆ -1 ಮನೆ ಕಳವು ಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.