ಶಶಿಕಲಾ ಬಳಿಕ ಸಹ ಕೈದಿ ಇಳವರಸಿ, ಸಂಬಂಧಿಕರಲ್ಲೂ ಕೊರೋನಾ ಸೋಂಕು ದೃಢ: ಆಸ್ಪತ್ರೆಗೆ ದಾಖಲು
ತಮಿಳುನಾಡು ಮಾಜಿ ಮುಖ್ಯಮಂದ್ರಿ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜ್'ಗೆ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಆಕೆಯ ಸಂಬಂಧಿಕರು ಹಾಗೂ ಪರಪ್ಪನ ಅಗ್ರಹಾರ ಜೈಲಿನ ಸಹಕೈದಿ ಇಳವರಸಿಗೂ ಕೊರೋನಾ ಸೋಂಕು ದೃಢಪಟ್ಟಿದ್ದು, ಶನಿವಾರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Published: 24th January 2021 07:39 AM | Last Updated: 24th January 2021 07:39 AM | A+A A-

ಇಳವರಸಿ
ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂದ್ರಿ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜ್'ಗೆ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಆಕೆಯ ಸಂಬಂಧಿಕರು ಹಾಗೂ ಪರಪ್ಪನ ಅಗ್ರಹಾರ ಜೈಲಿನ ಸಹಕೈದಿ ಇಳವರಸಿಗೂ ಕೊರೋನಾ ಸೋಂಕು ದೃಢಪಟ್ಟಿದ್ದು, ಶನಿವಾರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಳೆದ 4 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸಿ ಇದೇ ತಿಂಗಳ 27 ರಂದು ಶಶಿಕಲಾ ಬಿಡುಗಡೆಯಾಗಬೇಕಿತ್ತು. ಅಷ್ಟರಲ್ಲಾಗಲೇ ಶಶಿಕಲಾ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ಶನಿವಾರ ಶಶೀಕಲಾ ಸಂಬಂಧಿ ಇಳವರಸಿಗೂ ಸೋಂಕು ದೃಢಪಟ್ಟಿದ್ದು, ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಯಲ್ಲಿ ಇಳವರಸಿಗೆ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದು ಆರೋಗ್ಯ ಉತ್ತಮವಾಗಿದೆ.
ಕೊರೋನಾ ಲಕ್ಷಣಗಳೂ ಇಲ್ಲ. ಭದ್ರತಾ ಕಾರಣಗಳಿಗೆ ವಿಶೇಷ ಕೊಠಡಿಯಲ್ಲಿ ಇರಿಸಿ ನಿಗಾವಹಿಸಲಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ.ಸಿಆರ್.ಜಯಂತಿ ಹೇಳಿದ್ದಾರೆ.
ಜೈಲಿನಲ್ಲಿ ಶಶಿಕಲಾ ಹಾಗೂ ಇಳವರಿಸಿ ಒಂದೇ ಕೊಠಡಿಯಲ್ಲಿದ್ದರು. ಶಶಿಕಲಾಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಾಥಮಿಕ ಸಂಪರ್ಕಿತೆಯಾಗಿದ್ದ ಇಳವರಸಿಗೂ ಸೋಂಕು ಪರೀಕ್ಷೆ ನಡೆಸಲಾಗಿತ್ತು.
ಇನ್ನು ತೀವ್ರ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಶಶಿಕಲಾ ಆರೋಗ್ಯ ಸುಧಾರಿಸಿದೆ. ಶ್ವಾಸಕೋಶದಲ್ಲಿ ಸೋಂಕು ಹೆಚ್ಚಿದ್ದರಿಂದ ತುರ್ತುನಿಗಾ ಘಟಕದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ತಾವೇ ಆಹಾರ ಸೇವನೆ ಮಾಡುತ್ತಿದ್ದಾರೆ. ಬಿಪಿ, ಮಧುಮೇಹ ಸೇರಿ ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.