
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಯವಸ್ಥಿತವಾದ ಸಂಚಾರ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೃಹ ಇಲಾಖೆ, ಬಿಬಿಎಂಪಿ ಜೊತೆಗೂಡಿ ಮುಂದಿನ ದಿನಗಳಲ್ಲಿ ಮಾದರಿಯಾಗುವ ಸಂಚಾರ ನಿರ್ವಹಣೆ ಮಾಡಲು ಪ್ರತ್ಯೇಕ ಪ್ರಾಧಿಕಾರ ರಚನೆ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಂಚಾರ ಪೊಲೀಸ್, ಸಾರಿಗೆ ಇಲಾಖೆ, ಬಿಬಿಎಂಪಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
2021 ನೇ ವರ್ಷವನ್ನು ಸಂಚಾರ ಸುರಕ್ಷತೆ ಸಂಚಾರ ನಿರ್ವಹಣೆ ವರ್ಷವಾಗಿ ಘೋಷಣೆ ಮಾಡಲಾಗಿದೆ ಎಂದರು.
ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಂದ ವಸೂಲು ಮಾಡುವ ದಂಡದಲ್ಲಿ ಶೇ.೫೦ರಷ್ಟನ್ನು ಸಂಚಾರ ನಿರ್ವಹಣೆಗೆ ಬಳಸಲು ಆರ್ಥಿಕ ಇಲಾಖೆ ಸಮ್ಮತಿಸಿದೆ.
ಆದರೆ ಶೇ.100ರಷ್ಟು ದಂಡದ ಹಣವನ್ನು ಕೊಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗುವುದು. ಅಪಘಾತ ನಡೆಯುವ ಸ್ಥಳಗಳ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಪಿಡಬ್ಲ್ಯಡಿ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರಕ್ಕೆ ಕೋರಲಾಗಿದೆ ಎದು ಹೇಳಿದರು.
ಕಳೆದ 10 ವರ್ಷಗಳಲ್ಲಿ ವಾಹನಗಳ ಸಂಖ್ಯೆ ತೀರಾ ಹೆಚ್ಚಿದೆ, ಹೀಗಾಗಿ ಸರಿಯಾದ ನಿರ್ವಹಣಾ ವ್ಯವಸ್ಥೆ ಅಗತ್ಯವಿದೆ, ಬಿಬಿಎಂಪಿ ಸಹಯೋಗದೊಂದಿಗೆ ಪ್ರತ್ಯೇಕ ಸಂಚಾರ ಪ್ರಾಧಿಕಾರ
ರಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ತಿಳಿಸಿದ್ದಾರೆ,
ಬೆಂಗಳೂರಿನಲ್ಲಿ ವಾಹನ ಜನಸಂಖ್ಯೆ ಸುಮಾರು 85 ಲಕ್ಷವಾಗಿದ್ದರೆ, ರಾಜ್ಯದ ಉಳಿದ ಭಾಗಗಳಲ್ಲಿ ಇದು ಸುಮಾರು 2.32 ಲಕ್ಷವಾಗಿದೆ, ದಟ್ಟಣೆಯನ್ನು ನಿವಾರಿಸಲು ಸರಿಯಾದ ನಿರ್ವಹಣೆ ಇದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು ”ಎಂದು ಬೊಮ್ಮಾಯಿ ಹೇಳಿದರು.