ಹಿಂದಿ ರಾಷ್ಟ್ರ ಭಾಷೆ ಹೇಳಿಕೆ; ಸಾಹಿತಿ ದೊಡ್ಡರಂಗೇಗೌಡರಿಗೆ ಅರಿವಿನ ಕೊರತೆಯಿರಬಹುದು; ನಿಖಿಲ್
ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದನ್ನು ಶಾಲಾ ಹಂತದಿಂದಲೇ ತಿಳಿಸಬೇಕಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
Published: 24th January 2021 12:10 PM | Last Updated: 24th January 2021 12:10 PM | A+A A-

ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದನ್ನು ಶಾಲಾ ಹಂತದಿಂದಲೇ ತಿಳಿಸಬೇಕಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಸಾಹಿತಿ ದೊಡ್ಡರಂಗೇಗೌಡರು 'ಹಿಂದಿ ರಾಷ್ಟ್ರ ಭಾಷೆ' ಎಂದು ಶುಕ್ರವಾರ ಹೇಳಿಕೆ ನೀಡಿದ್ದರು. ಆ ಹೇಳಿಕೆ ಬಗ್ಗೆ ನಿಖಿಲ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಹಿಂದಿ ನಮ್ಮ ರಾಷ್ಟ್ರ ಭಾಷೆ ಕನ್ನಡಿಗರಾದ ನಾವು ಅದನ್ನು ಒಪ್ಪಿಕೊಳ್ಳಬೇಕು ಎಂದಿರುವ 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ದೊಡ್ಡ ರಂಗೇಗೌಡರ ಮಾತು ಕೇಳಿ ಅಚ್ಚರಿಯಾಯಿತು. ಬಹುಶಃ ಇದು ಅವರ ಅರಿವಿನ ಕೊರತೆಯಾಗಿರಬಹುದು' ಎಂದು ಅವರು ಟ್ವೀಟಿಸಿದ್ದಾರೆ.
'ನಮ್ಮ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ವಿಚಾರವನ್ನು ಕಲಿಸುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಯೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ರೀತಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ತಪ್ಪಾಗಿ ಭಾವಿಸಿಕೊಳ್ಳುವ ಸಾಧ್ಯತೆ ಇದೆ' ಎಂದು ನಿಖಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.