ಶಿವಮೊಗ್ಗ ಕ್ರಷರ್ ಕ್ರಮಬದ್ಧ, ಕ್ವಾರಿ ಅಕ್ರಮ: ಸಿಎಂ ಯಡಿಯೂರಪ್ಪ
ಹುಣಸೋಡಿನಲ್ಲಿ ಕ್ರಷರ್ ಕ್ರಮಬದ್ಧವಾಗಿದ್ದು, ಕಲ್ಲುಗಣಿಗಾರಿಕೆ ನಡೆಸಲು ಅನುಮತಿ ನೀಡಿಲ್ಲ ಎನ್ನುವ ಮೂಲಕ ಜಿಲ್ಲೆಯ ಹುಣಸೋಡಿನಲ್ಲಿ ನಡೆದಿರುವುದು ಅಕ್ರಮ ಗಣಿಗಾರಿಕೆ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
Published: 24th January 2021 07:28 AM | Last Updated: 24th January 2021 07:28 AM | A+A A-

ಯಡಿಯೂರಪ್ಪ
ಬೆಂಗಳೂರು: ಹುಣಸೋಡಿನಲ್ಲಿ ಕ್ರಷರ್ ಕ್ರಮಬದ್ಧವಾಗಿದ್ದು, ಕಲ್ಲುಗಣಿಗಾರಿಕೆ ನಡೆಸಲು ಅನುಮತಿ ನೀಡಿಲ್ಲ ಎನ್ನುವ ಮೂಲಕ ಜಿಲ್ಲೆಯ ಹುಣಸೋಡಿನಲ್ಲಿ ನಡೆದಿರುವುದು ಅಕ್ರಮ ಗಣಿಗಾರಿಕೆ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಜಿಲ್ಲೆಯ ಗಣಿ ಸ್ಫೋಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಇಲ್ಲಿನ ಸುತ್ತುಮತ್ತಲಿನ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಕ್ರಷರ್ ಮತ್ತು ಗಣಿಗಾರಿಕೆಗೆ ಪರವಾನಗಿ ನೀಡಬಾರದೆಂಬ ಬೇಡಿಕೆಯಿದೆ. ಈ ಬೇಡಿಕೆ ಸರ್ಕಾರ ಪರಿಶೀಲಿಸಲಿದೆ ಎಂದು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಇರುವ ಎಲ್ಲಾ ಕ್ರಷರ್ ಕಾನೂನುಬದ್ಧವಾಗಿಯೇ ಇವೆ. ಆದರೆ, ಇಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಇಲ್ಲಿ ನಡೆದಿರುವುದು ಅಕ್ರಮ ಗಣಿಗಾರಿಗೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಸ್ಫೋಟಕ ಬಳಕೆ ಮತ್ತು ಸಾಗಣೆ ಸೇರಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದ್ದು, ಹೈದರಾಬಾದ್ ನಿಂದ ಡೈರೆಕ್ಟ್ ಆಫ್ ಎಕ್ಸ್ ಪೋಸಿವ್ ತಂಡ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದೆ. ಸ್ಥಳೀಯವಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ಹಂತದಲ್ಲಿ ಬೇರೆ ಮಾತು ತನಿಖೆ ದಾರಿ ತಪ್ಪಿಸಬಹುದು ತನಿಖೆಯ ಬಳಿಕವೇ ಎಲ್ಲಾ ವಿವರವೂ ಸ್ಪಷ್ಟವಾಗಲಿದೆ ಎಂದಿದ್ದಾರೆ.
ಈ ಘಟನೆಗೆ ಯಾರೇ ಕಾರಣರಾಗಿರಲಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಘಟನೆಯಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದು, ದುರ್ಘಟನೆಯಲ್ಲಿ ಸಾವಿಗೀಡಾದ ಮೃತರ ಕುಟುಂಬಗಳಿಗೆ ಈಗಾಗಲೇ ರೂ.5 ಲಕ್ಷ ಪರಿಹಾರ ಘೋಷಿಸಲಾಗಿದೆ. ಸುತ್ತಮುತ್ತ ಮನೆಗಳಿಗೂ ಹಾನಿಯಾಗಿದೆ ಅವರಿಗೂ ಪರಿಹಾರ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.