ಕೋವಿಡ್-19: ಕಳೆದ 10 ದಿನಗಳಲ್ಲಿ ಬೆಂಗಳೂರಿನ ಎಂಟು ವಾರ್ಡ್ ಗಳಲ್ಲಿ ಶೂನ್ಯ ಪ್ರಕರಣ!
ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ನಗರದ ಎಂಟು ವಾರ್ಡ್ ಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.
Published: 25th January 2021 09:10 AM | Last Updated: 25th January 2021 09:10 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ನಗರದ ಎಂಟು ವಾರ್ಡ್ ಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಆರಂಭದಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿದ್ದ ಪಶ್ಚಿಮ ವಲಯದಲ್ಲಿ ನಾಲ್ಕು ಹಾಗೂ ದಕ್ಷಿಣ ವಲಯದಲ್ಲಿ ನಾಲ್ಕು ವಾರ್ಡ್ ಗಳಲ್ಲಿ ಸೋಂಕು ತೀವ್ರ ರೀತಿಯಲ್ಲಿ ಇಳಿಮುಖಗೊಂಡಿದೆ.
ದಕ್ಷಿಣ ವಲಯದ ಗುರಪ್ಪನಪಾಳ್ಯ (ವಾರ್ಡ್ 171) ಬನಶಂಕರಿ ದೇವಾಲಯ ವಾರ್ಡ್ (180) ಕೆಂಪಾಪುರ ಅಗ್ರಹಾರ (ವಾರ್ಡ್ 122) ವಿಜಯನಗರ (ವಾರ್ಡ್ 123) ಹಾಗೂ ಪಶ್ಚಿಮ ವಲಯದ ಬಿನ್ನಿಪೇಟೆ ( ವಾರ್ಡ್ 121) ಜಗಜೀವನರಾಂ ನಗರ ( ವಾರ್ಡ್ 136) ಪ್ರಕಾಶ್ ನಗರ ( ವಾರ್ಡ್ 98) ಗಳಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಅಧಿಕಾರಿಗಳು ಆರಂಭಿಕ ಹಂತದಲ್ಲಿಯೇ ಸೋಂಕು ಪತ್ತೆ ಹಚ್ಚಿ, ಮುಂಜಾಗ್ರತೆ ವಹಿಸಿದ್ದರಿಂದ ಸೋಂಕು ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ.
68 ಸಾವಿರ ಜನಸಂಖ್ಯೆ ಹೊಂದಿರುವ ಗುರಪ್ಪನ ಪಾಳ್ಯ ವಾರ್ಡ್ ನಲ್ಲಿ ಹೆಚ್ಚಿನ ಕೋವಿಡ್ ಸಾವುಗಳು ಸಂಭವಿಸಿತ್ತು. ಆದರೆ, ಆರಂಭಿಕ ಹಂತದಲ್ಲಿ ಸೋಂಕು ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸಿದ್ದರಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ತಾವರೆಕೆರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ್ ಕುಮಾರ್.
ಸೋಂಕು ಪತ್ತೆಗಾಗಿ ಮುನ್ನೆಚ್ಚರಿಕೆ ವಹಿಸಿ, ಸೋಂಕು ಕಂಡುಬಂದವರನ್ನು ಐಸೋಲೇಷನ್ ಮಾಡಿದ್ದರಿಂದ ಸೋಂಕಿನ ಪ್ರಕರಣ ಇಳಿಮುಖವಾಗಿದೆ ಎಂದು ಪ್ರಕಾಶ್ ನಗರ ಹಾಗೂ ಬನಶಂಕರಿ ಟೆಂಪಲ್ ವಾರ್ಡ್ ವೈದ್ಯಾಧಿಕಾರಿಗಳಾದ ಡಾ. ಮಂಜುಳಾ ಹಾಗೂ ಡಾ. ಸಿಕೆ ಮೋಹನ್ ಕುಮಾರ್ ತಿಳಿಸಿದ್ದಾರೆ.
ಆದಾಗ್ಯೂ, ಕಳೆದ 10 ದಿನಗಳಲ್ಲಿ ಬೆಳ್ಳಂದೂರು, ಸುದ್ದಗುಂಟೆ ಪಾಳ್ಯ, ವರ್ತೂರು, ದೊಡ್ಡನೆಕುಂದಿ, ಹೊರಮಾವು, ಜ್ಞಾನಭಾರತಿ, ಹೆಚ್ ಬಿಆರ್ ಲೇಔಟ್ , ಬ್ಯಾಟರಾಯನಪುರ, ಉತ್ತರಹಳ್ಳಿ ಮತ್ತು ವಸಂತಪುರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕಂಡುಬಂದಿವೆ.