ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತರ ಸಂಖ್ಯೆ 14ಕ್ಕೆ ಏರಿಕೆ, ಎಸ್ ಡಿಎ ಭಾಗಿ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹುದ್ದೆ ನೇಮಕಾತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈವರೆಗೂ 14 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
Published: 25th January 2021 12:12 AM | Last Updated: 25th January 2021 12:12 AM | A+A A-

ಕೆಪಿಎಸ್ಸಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹುದ್ದೆ ನೇಮಕಾತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈವರೆಗೂ 14 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಮಾಹಿತಿ ನೀಡಿದ್ದು, ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈವರೆಗೂ 14 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 35 ಲಕ್ಷ ನಗದು ಮತ್ತು 4 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿನ್ನೆ ನಮಗೆ ಖಚಿತ ಮಾಹಿತಿ ಬಂದಿತ್ತು. ಆ ಆಧಾರದ ಮೇಲೆ ನಾವು ಚಂದ್ರು ಮತ್ತು ರಾಜಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಗೊತ್ತಾಯಿತು. ನಂತರ ಸಿಸಿಬಿ ಪೊಲೀಸ್ ಅಕಾರಿಗಳ ತಂಡಗಳು ಅವರುಗಳ ಮನೆಗಳ ಮೇಲೆ ದಾಳಿ ಮಾಡಿದಾಗ ಪ್ರಶ್ನೆ ಪತ್ರಿಕೆ ಇರುವುದು ಕಂಡುಬಂದಿತು. ಈವರೆಗೂ 14 ಮಂದಿಯನ್ನು ಬಂಸಲಾಗಿದೆ ಎಂದು ಅವರು ತಿಳಿಸಿದರು.
ಇದೊಂದು ಗಂಭೀರ ಪ್ರಕರಣವಾಗಿದ್ದು, ಪ್ರಶ್ನೆ ಪತ್ರಿಕೆ ಯಾವ ಮಟ್ಟದಲ್ಲಿ ಸೋರಿಕೆಯಾಗಿದೆ, ಈ ಪ್ರಕರಣದಲ್ಲಿ ಯಾರ್ಯಾರಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಸಿಸಿಬಿ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಿನ್ನೆ ಸಿಸಿಬಿ ಪೊಲೀಸರು ವಾಣಿಜ್ಯ ತೆರಿಗೆ ಇಲಾಖೆಯ ಅಕಾರಿ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಬಂಧಿಸಿದ್ದು, ತನಿಖೆ ಇನ್ನೂ ಮುಂದುವರಿದಿದೆ ಎಂದು ಅವರು ಹೇಳಿದರು.
ಎಸ್ ಡಿಎ ಭಾಗಿ, ಬಂಧನ
ಪ್ರಶ್ನೆಪತ್ರಿಕೆ ಸೋರಿಕೆ ಕೇಸ್ನಲ್ಲಿ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳ ಗ್ರಾಮದ ರಮೇಶ್ ಹೆರಕಲ್ ಎಂಬುವವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. SDA ಆಗಿರುವ ರಮೇಶ್ ಹೆರಕಲ್ ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ಬಹಿರಂಗವಾದ ಬೆನ್ನಲ್ಲೇ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮಕ್ಕೆ ತೆರಳಿದ್ದನು. ಹೀಗಾಗಿ, ಆರೋಪಿಯ ಬೆನ್ನತ್ತಿದ್ದ ಸಿಸಿಬಿ ತಂಡ ರಮೇಶ್ನನ್ನು ಚಿಕ್ಕಪಡಸಲಗಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಎಫ್ಡಿಎ ಪರೀಕ್ಷೆ ಮುಂದೂಡಿಕೆ
ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಮಾಹಿತಿ ಪಡೆದ ಬೆನ್ನಲ್ಲೇ ಕೆಪಿಎಸ್ ಸಿ ನಾಳೆ (.ಜ. 24) ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆಯನ್ನು ಮುಂದೂಡಿದೆ. ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಕಾರ್ಯದರ್ಶಿ ಜಿ. ಸತ್ಯವತಿ ಅವರು, '2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹುದ್ದೆಗಳ ನೇಮಕಾತಿಗಾಗಿ ಜ. 24 ಹಾಗೂ ಜ. 25ರಂದು ಪರೀಕ್ಷೆ ನಡೆಯಬೇಕಿತ್ತು. ಆದರೆ, ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ದುಷ್ಕರ್ಮಿಗಳ ಕೈಗೆ ಸಿಕ್ಕಿರುವುದು ಮೂಲಗಳಿಂದ ಗೊತ್ತಾಗಿದೆ. ಅದೇ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕವನ್ನು ಮರು ನಿಗದಿಪಡಿಸಲಾಗುವುದು. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು' ಎಂದೂ ಹೇಳಿದ್ದಾರೆ.
ಕನ್ನಡ ಪ್ರಶ್ನೆಪತ್ರಿಕೆ ಸೋರಿಕೆ
'ಬೆಂಗಳೂರಿನ ಕೆಲವು ಕಡೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಮಾಹಿತಿ ಸಿಸಿಬಿ ಮೂಲಕ ನಮಗೆ ಸಿಕ್ಕಿದೆ. ಭಾನುವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಪರೀಕ್ಷೆ ನಡೆಯಬೇಕಿತ್ತು. ಆದರೆ, ಬೆಳಿಗ್ಗೆ ನಡೆಯಬೇಕಿದ್ದ ಕನ್ನಡ ಪತ್ರಿಕೆ ಸೋರಿಕೆಯಾಗಿದೆ ಎಂದು ಗೊತ್ತಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುವಂತೆ ನಾವು ಕೂಡಾ ದೂರು ಕೊಟ್ಟಿದ್ದೇವೆ' ಎಂದು ಪರೀಕ್ಷಾ ನಿಯಂತ್ರಕರಾದ ದಿವ್ಯಾಪ್ರಭು ತಿಳಿಸಿದರು.