ಗಣರಾಜ್ಯೋತ್ಸವ ಸಂಭ್ರಮಕ್ಕೆ ಮಾಣೆಕ್ ಷಾ ಪರೇಡ್ ಮೈದಾನ ಸಿದ್ದ: ಸಾರ್ವಜನಿಕರಿಗೆ ಪ್ರವೇಶವಿಲ್ಲ, ಕಾರ್ಯಕ್ರಮ 40 ನಿಮಿಷಕ್ಕೆ ಸೀಮಿತ
72ನೇ ಗಣರಾಜ್ಯೋತ್ಸವ ಆಚರಣೆಗೆ ನಗರ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನ ಸಿದ್ಧತೆಗೊಂಡಿದ್ದು, ಕೋವಿಡ್ ಮಾರ್ಗಸೂಚಿ ಅನ್ವಯ ಸರಳವಾಗಿ ಆಚರಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
Published: 25th January 2021 08:22 AM | Last Updated: 25th January 2021 12:50 PM | A+A A-

ಬೆಂಗಳೂರು: 72ನೇ ಗಣರಾಜ್ಯೋತ್ಸವ ಆಚರಣೆಗೆ ನಗರ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನ ಸಿದ್ಧತೆಗೊಂಡಿದ್ದು, ಕೋವಿಡ್ ಮಾರ್ಗಸೂಚಿ ಅನ್ವಯ ಸರಳವಾಗಿ ಆಚರಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಪ್ರತಿವರ್ಷ ಗಣರಾಜ್ಯೋತ್ಸವದಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಕಾರ್ಯಕ್ರಮದಲ್ಲಿ ಕೇವಲ 500 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಇಡೀ ಕಾರ್ಯಕ್ರಮ 40 ನಿಮಿಷದಲ್ಲಿ ಮುಗಿಯಲಿದೆ ಎಂದು ಅವರು ತಿಳಿಸಿದರು.
ಇಂದು ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಗಣರಾಜ್ಯೋತ್ಸವ ದಿನದಂದು ಬೆಳಿಗ್ಗೆ 8:50ಕ್ಕೆ ರಾಜ್ಯಪಾಲರು ಆಗಮಿಸಲಿದ್ದು, ಭಾರತೀಯ ರಕ್ಷಣಾ ಸೇವೆಯ ಗೌರವ ವಂದನೆಯನ್ನು ಸ್ವೀಕರಿಸಿ, ನಂತರ 9 ಗಂಟೆಗೆ ಧ್ವಜಾರೋಹಣ ನೆರವೇರಿಸುವರು ಎಂದು ಆಯುಕ್ತರು ತಿಳಿಸಿದರು.
ಕಾರ್ಯಕ್ರಮ ವೀಕ್ಷಣೆಗೆ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಪಾಸ್ ಹೊಂದಿರುವ ಗಣ್ಯರು, ಅತಿ ಗಣ್ಯರು ಹಾಗೂ ವಿಶೇಷ ಆಹ್ವಾನಿತರು ಸೇರಿ 500 ಮಂದಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಬಾರಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ನಾಡಗೀತೆ, ರೈತ ಹೀತೆ, ಪೊಲೀಸ್, ಮಿಲಿಟರಿ ಪಡೆಗಳಿಂದ ಪರೇಡ್, ರಾಜ್ಯಪಾಲರಿಂದ ರಾಜ್ಯದ ಜನತೆಗೆ ಸಂದೇಶ, ರಾಷ್ಟ್ರಗೀತೆ, ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾತ್ರ ಇರಲಿದೆ.
ಕಾರ್ಯಕ್ರಮ ವೀಕ್ಷಣೆಗೆ ಬರುವವರು ಮೈದಾನದೊಳಗೆ ಹೆಲ್ಮೆಟ್, ಕರಪತ್ರಗಳು, ಕ್ಯಾಮರಾ, ನೀರಿನ ಬಾಟಲ್, ಸಿಗರೇಟ್, ಬೆಂಕಿಪೊಟ್ಟಣ, ಶಸ್ತ್ರಾಸ್ತ್ರಗಳು, ಹರಿತವಾದ ವಸ್ತುಗಳು, ಕಪ್ಪು ಕರವಸ್ತ್ರ, ಪಟಾಕಿ, ಬಾವುಟ, ಮದ್ಯದ ಬಾಟಲ್, ಮಾದಕ ವಸ್ತುಗಳು, ತಿಂಡಿ, ತಿನಿಸು ತರುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.