ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಅನುಮತಿ ನಿರಾಕರಿಸಿದ ಪೊಲೀಸರು
ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಮಂಗಳವಾರ ನಗರದಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅನುಮತಿ ನಿರಾಕರಿಸಿದ್ದಾರೆ.
Published: 25th January 2021 05:59 PM | Last Updated: 25th January 2021 05:59 PM | A+A A-

ದೆಹಲಿ ಗಡಿಯಲ್ಲಿ ರೈತರ ಟ್ರ್ಯಾಕ್ಟರ್ ಮೆರವಣಿಗೆ
ಬೆಂಗಳೂರು: ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಮಂಗಳವಾರ ನಗರದಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅನುಮತಿ ನಿರಾಕರಿಸಿದ್ದಾರೆ.
ಕೃಷಿ ಕಾನೂನುಗಳನ್ನು ವಿರೋಧಿಸಿ ಸುಮಾರು 20,000 ರೈತರು ತುಮಕೂರು ರಸ್ತೆಯ ನೈಸ್ ರಸ್ತೆಯಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಟ್ರ್ಯಾಕ್ಟರ್ ಪರೇಡ್ ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಪೊಲೀಸ್ ಆಯುಕ್ತರು, 'ಗಣರಾಜ್ಯೋತ್ಸವ ಭದ್ರತೆ ಸಂಬಂಧ ಅಧಿಕಾರಿಗಳ ಸಭೆ ನಡೆಸಲಾಯಿತು. ಇದೇ ವೇಳೆಯೇ ರೈತ ಟ್ರ್ಯಾಕ್ಟರ್ ರ್ಯಾಲಿ ಬಗ್ಗೆಯೂ ಚರ್ಚೆ ಆಯಿತು' ಎಂದರು.
ಗಣರಾಜ್ಯೋತ್ಸವ ಆಚರಣೆ ಶಾಂತಿಯುತವಾಗಿ ನಡೆಸಲು ನಗರದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಸೋಮವಾರ ಸಂಜೆಯಿಂದಲೇ ನಗರದಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ ಎಂದೂ ಹೇಳಿದರು.
ನಗರದಲ್ಲಿ ಶಾಂತಿಯುತ ಪ್ರತಿಭಟನೆಗೆ ಮಾತ್ರ ಅವಕಾಶ ನೀಡಲಾಗುವುದು. ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆಗೆ ಬಂದರೆ, ಅಂಥ ಪ್ರತಿಭಟನಾಕಾರರನ್ನು ನಗರದ ಒಳಗೆ ಬಿಡುವುದಿಲ್ಲ ನಗರದಲ್ಲಿ ಹಿಂದೆ ಎಂದೂ ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆ ನಡೆದಿಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಕೆಲವರು ಅನುಮತಿ ಕೋರಿದ್ದಾರೆ. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕಮಲ್ ಪಂತ್ ತಿಳಿಸಿದರು.