
ನಟಿ ರಾಗಿಣಿ
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿದ್ದ ನಟಿ ರಾಗಿಣಿ ದ್ವಿವೇದಿ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಹೌದು.. ಸತತ 144 ದಿನಗಳ ಕಾಲ ಜೈಲಿನಲ್ಲಿದ್ದ ನಟಿ ರಾಗಿಣಿ ದ್ವಿವೇದಿಗೆ ಇಂದು ಬಿಡುಗಡೆ ಭಾಗ್ಯ ದೊರೆತಿದ್ದು, ಕೆಲವು ದಿನಗಳ ಹಿಂದೆಯೇ ರಾಗಿಣಿಗೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಮಂಜೂರು ಆಗಿದ್ದರೂ ಕಾರಣಾಂತರಗಳಿಂದ ಅವರ ಬಿಡುಗಡೆ ವಿಳಂಬವಾಗಿತ್ತು. ಜನವರಿ 21ರಂದು ಜಾಮೀನು ಸಿಕ್ಕಿದೆ. ಸುಪ್ರೀಂಕೋರ್ಟ್ ಆದೇಶ ಪ್ರತಿಯನ್ನು ಬೆಂಗಳೂರಿನ ಎನ್ಡಿಪಿಎಸ್ ನ್ಯಾಯಾಲಯಕ್ಕೆ ತಲುಪಿಸಲು ವಿಳಂಬವಾಗಿದೆ. ಶುಕ್ರವಾರದಂದು (ಜ.22) ಆದೇಶ ಪ್ರತಿ ತಲುಪಿದೆ. ಆದರೆ, ಕೋವಿಡ್-19 ನಿಯಮಗಳ ಪ್ರಕಾರ ಪ್ರತಿಯನ್ನು ಡಬ್ಬದಲ್ಲಿ ಹಾಕಿ ಸ್ಯಾನಿಟೈಸ್ ಮಾಡಬೇಕು. ನಂತರವೇ ನ್ಯಾಯಾಧೀಶರ ಸಮ್ಮುಖದಲ್ಲಿ ಇರಿಸಲಾಗುತ್ತದೆ. ಈ ಪ್ರಕ್ರಿಯೆಗಳು ಶುಕ್ರವಾರ ಪೂರ್ಣಗೊಂಡಿಲ್ಲ. ಜ.23 ನಾಲ್ಕನೇ ಶನಿವಾರ ಆಗಿದ್ದ ಕಾರಣ ಸರ್ಕಾರಿ ರಜೆ. ನ್ಯಾಯಾಲಯ ಕಾರ್ಯ ನಿರ್ವಹಿಸುವುದಿಲ್ಲ. ಭಾನುವಾರ ಕೂಡ ರಜೆ ಇರುವ ಕಾರಣ ಸೋಮವಾರ ಬೆಳಗ್ಗೆ ನ್ಯಾಯಾಲಯವೂ ಜಾಮೀನು ಆದೇಶ ಪ್ರತಿ ಪರಿಶೀಲಿಸಿ ಬಿಡುಗಡೆ ಮಾಡಲು ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡುತ್ತದೆ. ಹೀಗಾಗಿ, ಸೋಮವಾರ (ಜ.25) ಮಧ್ಯಾಹ್ನದ ನಂತರವೇ ರಾಗಿಣಿ ಜೈಲಿನಿಂದ ಹೊರಬರಲಿದ್ದಾರೆ. ಇದೀಗ ನಟಿಗೆ ಇಂದು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗುವ ಅವಕಾಶ ಸಿಕ್ಕಿದೆ.
ರಾಗಿಣಿ ಜಾಮೀನಿಗೆ ಚಿನ್ನಸ್ವಾಮಿ ಮತ್ತು ಕೃಷ್ಣ ಎಂಬುವವರಿಂದ ಶ್ಯೂರಿಟಿ ಪಡೆಯಲಾಗಿದೆ. ಸೂಪರ್ ಡಿಸ್ಕೌಂಟ್ ಕಂಪನಿ ಹೊಂದಿರುವ ಚಿನ್ನಸ್ವಾಮಿ ಮತ್ತು ಕೃಷ್ಣ ಎಂಬುವವರಿಂದ ಶ್ಯೂರಿಟಿ ಪಡೆಯಲಾಗಿದೆ. ನಟಿ ರಾಗಿಣಿ ಕಂಪನಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.
ಬಿಡುಗಡೆಯಾಗುತ್ತಿದ್ದಂತೆಯೇ ದೇಗುಲ ಭೇಟಿ
ಜೈಲಿನಿಂದ ಹೊರಬರುತ್ತಿದ್ದಂತೆ ನಟಿ ದೇಗುಲಕ್ಕೆ ಭೇಟಿಕೊಟ್ಟರು. ಸೆಂಟ್ರಲ್ ಜೈಲು ಬಳಿಯಿರುವ ಜಡೆ ಮುನೇಶ್ವರ ಸ್ವಾಮಿ ದೇಗುಲಕ್ಕೆ ನಟಿ ರಾಗಿಣಿ ಭೇಟಿಕೊಟ್ಟರು. ಮುನೇಶ್ವರ ಸ್ವಾಮಿಗೆ ನಮಸ್ಕರಿಸಿದ ನಟಿ ರಾಗಿಣಿ ದ್ವಿವೇದಿ ಬಳಿಕ ಅಲ್ಲಿಂದ ತಮ್ಮ ಕಾರಿನಲ್ಲಿ ತೆರಳಿದರು.
ಸತ್ಯಮೇವ ಜಯತೆ, ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ: ನಟಿ ರಾಗಿಣಿ
ಇನ್ನು ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ನಟಿ ರಾಗಿಣಿ, ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇತ್ತು. ಇದೀಗ ಅದು ನಿಜವಾಗಿದೆ. ಸತ್ಯಮೇವ ಜಯತೆ. ಪ್ರಸ್ತುತ ನಾನು ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಇಚ್ಛಿಸುತ್ತೇನೆ ಎಂದು ಹೇಳಿದರು. ಇದಕ್ಕೂ ಮೊದಲು ಮಾತನಾಡಿದ್ದ ನಟಿ ರಾಗಿಣಿ ಅವರ ತಂದೆ ರಾಕೇಶ್ ದ್ವಿವೇದಿ, 'ಮಗಳು ರಾಗಿಣಿ ಬಿಡುಗಡೆ ಆಗುತ್ತಿರುವುದು ಸಂತಸ ತಂದಿದೆ. ಇನ್ನು 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ. ಸಹಜವಾಗಿ ನಟಿ ರಾಗಿಣಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಅವಳು ಹೊರಬಂದ ತಕ್ಷಣ ಮೆಡಿಕಲ್ ಟೆಸ್ಟ್ ಮಾಡಿಸುತ್ತೇವೆ. ಜೊತೆಗೆ, ನಾವು ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.